ಬೆಂಗಳೂರು: ಡೀಸೆಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ಲಾರಿ ಹಾಗೂ ಇನ್ನಿತರ ಗೂಡ್ಸ್ ವಾಹನಗಳಲ್ಲಿ ಸರಕು ಸಾಗಣೆ ವೆಚ್ಚ ಬಲು ದುಬಾರಿಯಾಗಿದೆ. ಕೂಡಲೇ ರಾಜ್ಯ ಸರ್ಕಾರ ಡೀಸೆಲ್ ಮೇಲೆ ವಿಧಿಸಿರುವ ವ್ಯಾಟ್ ಕಡಿಮೆ ಮಾಡಬೇಕು ಇಲ್ಲವಾದಲ್ಲಿ ಅಕ್ಟೋಬರ್ 23 ರಿಂದ ಲಾರಿ ಹಾಗೂ ಗೂಡ್ಸ್ ಸಾಗಣೆ ವಾಹನಗಳು ಸಂಪೂರ್ಣ ಬಂದ್ ಆಗಲಿವೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಎಚ್ಚರಿಸಿದ್ದಾರೆ.
ಈಗಾಗಲೇ ಡೀಸೆಲ್ ಬೆಲೆ ಶತಕ ಬಾರಿಸಿದೆ. ಕೇವಲ ಒಂದು ವರ್ಷದಲ್ಲಿ 26 ರೂ ಹೆಚ್ಚಳವಾಗಿದೆರಾಜ್ಯ ಸರ್ಕಾರಕ್ಕೆ ಅಕ್ಟೋಬರ್ 23ವರೆಗೆ ಗಡುವು ನೀಡುತ್ತೇವೆ. ಅಷ್ಟರೊಳಗಾಗಿ ರಾಜ್ಯ ಸರ್ಕಾರ ಡೀಸೆಲ್ ಮೇಲೆ ವಿಧಿಸಿರುವ ವ್ಯಾಟ್ ಕಡಿಮೆ ಮಾಡದಿದ್ದಲ್ಲಿ ಯಾವುದೇ ಲಾರಿ ಹಾಗೂ ಗೂಡ್ಸ್ ವಾಹನಗಳು ರಸ್ತೆ ಇಳಿಯೋದಿಲ್ಲ. ಮುಷ್ಕರ ಅನಿವಾರ್ಯವಾಗಲಿದೆ ಎಂದು ಷಣ್ಮುಗಪ್ಪ ಹೇಳಿದ್ದಾರೆ.
ತೈಲ ಬೆಲೆ ಏರಿಕೆಯ ಪರಿಣಾಮದಿಂದ ಸಾಗಣೆ ವೆಚ್ಚ ಹೆಚ್ಚಳವಾಗಿ ಅಗತ್ಯ ವಸ್ತುಗಳ ಬೆಲೆ ಈಗಾಗಲೇ ಹೆಚ್ಚಾಗಿದೆ. ಗೂಡ್ಸ್ ಲಾರಿ ಬಂದ್ ಆದರೆ ಎಲ್ಲ ರೀತಿಯ ವಸ್ತುಗಳ ಸರಬರಾಜು ಬಂದ್ ಆಗಲಿದೆ. ಹಾಲು, ಹಣ್ಣು, ತರಕಾರಿ, ಹೂ, ದಿನಸಿ ಪದಾರ್ಥಗಳು ಸೇರಿದಂತೆ ಎಲ್ಲ ಸರಕು ಸಾಗಾಣಿಕೆ ಸಮಸ್ಯೆ ಇದರಿಂದಾಗಿ ಮತ್ತಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ.
Kshetra Samachara
18/10/2021 11:08 am