ಬೆಂಗಳೂರು: ಇಂದಿನಿಂದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳು ಆರಂಭಗೊಂಡಿವೆ. ಹಿಜಾಬ್ ವಿವಾದದಿಂದ ದೂರ ಇರುವ ಬೆಂಗಳೂರಿನಲ್ಲಿ ಎಂದಿನಂತೆ ತರಗತಿಗಳು ನಡೆಯುತ್ತಿದೆ. ಆದರೆ ಈ ಮಧ್ಯೆ ಮಲ್ಲೇಶ್ವರಂ 13ನೇ ಕ್ರಾಸ್‌ನಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಜಾಬ್ ಹಾಗೂ ಬುರ್ಖಾ ಧರಿಸಿಯೇ ಹೋಗುವಂತೆ ಕಾಂಗ್ರೆಸ್ಸಿನ ಕೆಲ ಕಾರ್ಯಕರ್ತರು ಒತ್ತಾಯ ಮಾಡಿರುವ ಘಟನೆ ನಡೆದಿದೆ.
ಸರ್ಕಾರಿ ಪಿಯುಸಿ ಕಾಲೇಜ್‌ಗೆ ಹಿಜಾಬ್ ಹಾಗು ಬುರ್ಕಾ ಧರಿಸಿ ವಿದ್ಯಾರ್ಥಿನಿಯರು ಆಗಮಿಸಿದ್ದರು. ಈ ವೇಳೆ ಪ್ರಾಂಶುಪಾಲ ಎ.ಎಸ್ ರವಿ, ವಿದ್ಯಾರ್ಥಿನಿಯರಿಗೆ ಧಾರ್ಮಿಕ ಉಡುಪನ್ನು ತೆರೆದಿಟ್ಟು ತರಗತಿಗಳಿಗೆ ತೆರಳುವಂತೆ ಸೂಚನೆ ನೀಡಿದ್ದರು.ಇನ್ನು ಪ್ರತ್ಯೇಕ ಕೊಠಡಿಗಳ ಒಳಗೆ ಧಾರ್ಮಿಕ ಉಡುಪು ತೆರೆದಿಟ್ಟು ತರಗತಿಗಳಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರನ್ನ ಹಿಜಾಬ್ ಹಾಗು ಬುರ್ಖಾ ಧರಿಸಿಯೇ ಹೋಗುವಂತೆ ಕಾಂಗ್ರೆಸ್ಸಿಗರು ಒತ್ತಾಯಿಸಿದ್ದಾರೆ.
ಮಲ್ಲೇಶ್ವರಂ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಿಶ್ವನಾಥ್ ಎಂಬುವವರು, ಹಿಜಾಬ್ ಧಾರಣೆಗೆ ಅವಕಾಶ ಕೊಡಬೇಕು. ಹಿಜಾಬ್ ಹಾಕಬಾರದು ಅಂದ್ರೆ ಸರ್ಕಾರದ ಆದೇಶವನ್ನು ತೋರಿಸಿ. ಕೋರ್ಟ್ ಹಿಜಾಬ್ ತೆಗೆಯುವಂತೆ ಎಂದಿಗೂ ಆದೇಶ ನೀಡಿಲ್ಲ. ನಿಮಗೆ ಬೇಕಾದಂತೆ ನೀವು ಕಾನೂನು ಅರ್ಥ ಮಾಡಿಕೊಳ್ಳಬೇಡಿ ಅಂತೆಲ್ಲ ಪ್ರಾಂಶುಪಾಲರ ಜೊತೆ ಮಾತಿನ ಚಕಮಕಿ ಆಗಿದೆ. ಇತ್ತ ಸ್ಥಳಕ್ಕಾಗಮಿಸಿದ ಮಲ್ಲೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಮಂಜಯ್ಯ, ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಇನ್ನು ಈ ಹಿಂದೆಯೂ ಹಿಜಾಬ್ ತೆರವು ಮಾಡಿಯೇ ಕ್ಲಾಸ್ ರೂಂಗೆ ಹೋಗ್ತಿದ್ರು. ಈಗ ನಾವೇನು ಹೊಸತು ಕಾನೂನು ಮಾಡ್ತಿಲ್ಲ ಕಾಲೇಜು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
PublicNext
16/02/2022 04:05 pm