ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಬಿಸಿ ಅಂಕಿ-ಅಂಶ ಒದಗಿಸಿ ಹೊಸದಾಗಿ ಮೀಸಲು ನಿಗದಿ ಸಾಧ್ಯವೇ?; ಸರಕಾರದ ನಿಲುವು ಕೇಳಿದ ಹೈಕೋರ್ಟ್‌

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (BBMP) 243 ವಾರ್ಡ್‌ಗಳಿಗೆ ಈಗ ನಿಗದಿಪಡಿಸಿರುವ ವಾರ್ಡ್‌ವಾರು ಮೀಸಲನ್ನು ಬದಲಾಯಿಸಿ, ಹೊಸದಾಗಿ ಮೀಸಲು ನಿಗದಿ ಮಾಡಲು ಸಾಧ್ಯವೇ ಎಂಬ ಬಗ್ಗೆ ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್‌ ಸರಕಾರವನ್ನು ಕೇಳಿದೆ. ಅಲ್ಲದೆ, ಅಲ್ಲಿಯವರೆಗೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಬಾರದು ಎಂದು ನ್ಯಾಯಾಲಯ ರಾಜ್ಯ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿದೆ.

ಈಜಿಪುರದ ಕೆ.ಮಹದೇವ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ಕುರಿತು ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯಪೀಠ ಸುಮಾರು ಎರಡು ಗಂಟೆ ವಾದ-ಪ್ರತಿವಾದ ಆಲಿಸಿದ ಬಳಿಕ ವಿಚಾರಣೆಯನ್ನು ಶುಕ್ರವಾರಕ್ಕೆ (ಸೆ.30ಕ್ಕೆ) ಮುಂದೂಡಿತು. ಅಷ್ಟರಲ್ಲಿ ಒಬಿಸಿ ಅಂಕಿ-ಅಂಶ ಒದಗಿಸಿ ಹೊಸದಾಗಿ ಮೀಸಲು ನಿಗದಿ ಸಾಧ್ಯವೇ? ಹೊಸದಾಗಿ ಮೀಸಲು ನಿಗದಿಪಡಿಸಲು ಎಷ್ಟು ಕಾಲಾವಕಾಶ ಬೇಕು? ಆ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಸರಕಾರಕ್ಕೆ ಸೂಚನೆ ನೀಡಿತು. ಅಲ್ಲಿಯವರೆಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸದಂತೆ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿತು.

ಅಲ್ಲದೆ, ''ಚುನಾವಣೆ ವಿಳಂಬವಾಗಬಾರದು. ಸುಪ್ರೀಂಕೋರ್ಟ್‌ನ ಆದೇಶದಂತೆ ನಡೆಯಬೇಕು, ಆದಷ್ಟೂ ಈ ವರ್ಷದೊಳಗೆ ಬಿಬಿಎಂಪಿ ಚುನಾವಣೆ ನಡೆಯಲೇಬೇಕು,'' ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, 'ಇತರೆ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಸೂಕ್ತವಾದ ಮೀಸಲು ಕಲ್ಪಿಸಲು ಸರಕಾರ ಸಿದ್ಧವಿದೆ. ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಎರಡು ತಿಂಗಳಲ್ಲಿ ಟ್ರಿಪಲ್‌ ಟೆಸ್ಟ್‌ ಪ್ರಕಾರವೇ ಒಬಿಸಿಗೆ ವಾರ್ಡ್‌ವಾರು ಮೀಸಲು ಒದಗಿಸುತ್ತೇವೆ,' ಎಂದು ಹೇಳಿದರು.

ಆದರೆ, ಸರಕಾರದ ವಾದಕ್ಕೆ ಆಕ್ಷೇಪ ಎತ್ತಿದ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ, 'ಬಿಬಿಎಂಪಿ ಅಕಾರಾವ ಮುಗಿದು ಎರಡು ವರ್ಷಗಳಾಗಿವೆ. ಸದ್ಯ ಬಿಬಿಎಂಪಿಯನ್ನು ಆಡಳಿತಾಕಾರಿ ನಡೆಸುತ್ತಿದ್ದಾರೆ. ಅದಕ್ಕೆ ಸಂವಿಧಾನದ ಆಶಯದಂತೆ ಚುನಾವಣೆ ನಡೆಯಬೇಕು.

ಒಬಿಸಿ ಮೀಸಲಾತಿ ಕಾರಣಕ್ಕೆ ಚುನಾವಣೆ ನಡೆಸುವುದರಿಂದ ವಿಳಂಬ ಮಾಡುವಂತಿಲ್ಲ. ಸುಪ್ರೀಂಕೋರ್ಟ್‌ ಕೂಡಲೇ ಚುನಾವಣೆ ನಡೆಸಲು ಸೂಚನೆ ನೀಡಿದೆ. ಹಾಗಾಗಿ, ಹಾಲಿ ನಿಗದಿ ಮಾಡಿರುವ ಮೀಸಲು ಪ್ರಕಾರವೇ ಚುನಾವಣೆ ನಡೆಸಲು ಅನುವು ಮಾಡಿಕೊಡಬೇಕು, ಎಂದು ಕೋರಿದರು.

ಅರ್ಜಿದಾರರ ಪರ ವಕೀಲರು, 'ಒಬಿಸಿ ಮೀಸಲು ನಿಗದಿಗೆ ಸರ್ವೆ ನಡೆಸಿಲ್ಲ. ಒಬಿಸಿ ಆಯೋಗ ಸರ್ವೆ ನಡೆಸದೇ ಮೀಸಲು ನೀಡಿದೆ. ರಾಜಕೀಯ ಹಿಂದುಳಿದಿರುವಿಕೆ ಬಗ್ಗೆಯೂ ಯಾವುದೇ ಸಮೀಕ್ಷೆ ನಡೆಸಿಲ್ಲ. ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ ಚುನಾವಣಾ ಆಯೋಗ ಟ್ರಿಪಲ್‌ ಟೆಸ್ಟ್‌ ಮಾನದಂಡ ಅನುಸರಿಸಿಲ್ಲ.

ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿಎಲ್ಲಾವಾರ್ಡ್‌ಗಳನ್ನೂ ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಹಾಗಾಗಿ, ಹೊಸದಾಗಿ ಒಬಿಸಿ ಸರ್ವೆ ನಡೆಸಲು ನಿರ್ದೇಶನ ನೀಡಬೇಕು,ಎಂದು ಕೋರಿದರು.

Edited By : Abhishek Kamoji
Kshetra Samachara

Kshetra Samachara

29/09/2022 12:11 pm

Cinque Terre

1.64 K

Cinque Terre

1

ಸಂಬಂಧಿತ ಸುದ್ದಿ