ಬೆಂಗಳೂರು: ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಹಲವು ಶಾಲೆಗಳಲ್ಲಿ ಶಿಕ್ಷಕರು- ವಿದ್ಯಾರ್ಥಿಗಳಲ್ಲಿ ಕೊರೊನಾ ಕಾಡುತ್ತಿದೆ. ಹೊಸಕೋಟೆ ತಾವರೆಕೆರೆ ಸರಕಾರಿ ಪ್ರೌಢಶಾಲೆಯ 25 ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕರಿಗೆ ಕೊರೊನಾ ದೃಢಪಟ್ಟಿದ್ದು, 223 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಮೊದಲನೇ ಪರೀಕ್ಷೆ ವರದಿಯಲ್ಲಿ 25 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.
ಇನ್ನುಳಿದ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ತಪಾಸಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಗೆ 3 ದಿನಗಳ ರಜೆ ಘೋಷಿಸಲಾಗಿದ್ದು, ಸೋಂಕು ತಗಲಿರುವ ವಿದ್ಯಾರ್ಥಿಗಳಿಗೆ 1 ವಾರ ರಜೆ ನೀಡಲಾಗಿದೆ. ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಈಗಾಗಲೇ ತಾವರೆಕೆರೆ ಗ್ರಾಪಂ ವತಿಯಿಂದ ಶಾಲೆಯಲ್ಲಿ ಸಭೆ ನಡೆಸಿ ಸ್ಯಾನಿಟರಿ ಮಾಡಿಸಿ ಬೇಕಾದ ವ್ಯವಸ್ಥೆ ಕಲ್ಪಿಸಿದ್ದಾರೆ. ಸರಕಾರ ಶಾಲೆಗಳನ್ನು ತೆರೆಯಬೇಕೋ ಬೇಡವೋ ಎನ್ನುವ ಗೊಂದಲ ನಡುವೆ ಈ ರೀತಿ ಶಾಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ.
ಫೆ. 7ರಿಂದ ಮೊದಲನೇ ಪ್ರಿಪರೇಟರಿ ಪರೀಕ್ಷೆ ಇರುವ ಕಾರಣ ಈ ಪರೀಕ್ಷೆ ಮುಂದೂಡುತ್ತಾರಾ ಅಥವಾ ಸೋಂಕು ತಗುಲುವ ಭಯದಿಂದ ಶಾಲೆಗಳನ್ನು ಬಂದ್ ಮಾಡುತ್ತಾರೋ ಎಂಬ ಗೊಂದಲಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಒಳಗಾಗಿದ್ದಾರೆ.
ಪರೀಕ್ಷೆ ಸಮಯ ನಿಗದಿಯಾಗಿ ಪರೀಕ್ಷೆ ಹತ್ತಿರವಾಗುತ್ತಿರುವ ಸಂದರ್ಭ ಕೊರೊನಾ ರಣಕೇಕೆ ಹಾಕುತ್ತಿರುವುದು ಶಿಕ್ಷಣ ಇಲಾಖೆಗೆ ತಲೆನೋವಾಗಿದೆ.
Kshetra Samachara
22/01/2022 07:56 am