ಬೆಂಗಳೂರು : ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಟೆಕ್ಕಿ ಅತುಲ್ ಸುಭಾಷ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನನ್ವಯ ಮಾರತ್ ಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅತುಲ್ ಸುಭಾಷ್ ಅವರ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 108 (ಆತ್ಮಹತ್ಯೆಗೆ ಪ್ರಚೋದನೆ) ಆರೋಪದಡಿ ಎಫ್ಐಆರ್ ದಾಖಲಾಗಿದೆ.
ಅತುಲ್ ಸುಭಾಷ್, ನಿಕಿತಾ ಸಿಂಘಾನಿಯಾಗೆ 2019ರಲ್ಲಿ ಮದುವೆಯಾಗಿತ್ತು.ದಂಪತಿಗೆ 4 ವರ್ಷದ ಗಂಡು ಮಗು ಸಹ ಇತ್ತು. ಆದರೆ ತನ್ನ ತಾಯಿ ಹಾಗೂ ಸಹೋದರನ ಕುಮ್ಮಕ್ಕಿನಿಂದ ಪತಿ ಅತುಲ್ ಸುಭಾಷ್ ವಿರುದ್ಧ ನಿಕಿತಾ ಸುಳ್ಳು ದೂರು ದಾಖಲಿಸಿದ್ದಳು ಎಂದು ಆರೋಪಿಸಲಾಗಿದೆ.
ಆರೋಪಿಗಳು ಅತುಲ್ ಸುಭಾಷ್‌ಗೆ ಪುತ್ರನ ಭೇಟಿಗೂ ಅವಕಾಶ ನೀಡದೆ 30 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಅಲ್ಲದೆ ಪ್ರಕರಣದ ನ್ಯಾಯಾಲಯದ ಕಲಾಪಗಳಿಗೆ ಅತುಲ್ ಸುಭಾಷ್ ಹಾಜರಾದ ಸಂದರ್ಭದಲ್ಲಿ '3 ಕೋಟಿ ರೂ ಕೊಡು, ಇಲ್ಲದಿದ್ದರೆ ಬದುಕಿರಬೇಡ' ಎಂದು ಅಣಕಿಸುತ್ತಿದ್ದರು. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ನೊಂದು ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬಿಕಾಸ್ ಕುಮಾರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೃತನ ಸಹೋದರನ ದೂರಿನನ್ವಯ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ.ಶಿವಕುಮಾರ್ ಗುಣಾರೆ ತಿಳಿಸಿದರು.
ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ (34) ಡಿಸೆಂಬರ್ 9ರಂದು ಮಾರತ್ ಹಳ್ಳಿಯ ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.ಸುಮಾರು 40 ಪುಟಗಳ ಡೆತ್ ನೋಟ್ ಬರೆದಿಟ್ಟು, ಸಾವಿನ ಬಳಿಕ ಮೃತದೇಹ ಗಮನಿಸುವವರಿಗೆ ವ್ಯವಸ್ಥಿತವಾಗಿ ಸೂಚನೆಗಳನ್ನ ನೀಡಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿತ್ತು.
ಸಾವಿಗೂ ಮುನ್ನ ಮಾಡಿರುವ ಸುಮಾರು 84 ನಿಮಿಷಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ʼಹಲೋ..ನಾನು ಅತುಲ್ ಸುಭಾಷ್, ನನಗೀಗ 34 ವರ್ಷ. ನಾನು ನನ್ನ ಜೀವ ತೆಗೆದುಕೊಳ್ಳುವುದು ಉತ್ತಮ ಎಂದು ಭಾವಿಸಿದ್ದೇನೆ..ನಾನು ಗಳಿಸಿದ ಹಣವೇ ನನ್ನ ಶತ್ರುವನ್ನ ಬಲಿಷ್ಠನನ್ನಾಗಿ ಮಾಡುತ್ತಿದೆ ಮತ್ತು ಅದೇ ಹಣವನ್ನೇ ನನ್ನ ಸರ್ವನಾಶಕ್ಕಾಗಿ ಬಳಸಿಕೊಳ್ಳಲಾಗ್ತಿದೆ..ದಿನೇದಿನೇ ಈ ಜಾಲ ದೊಡ್ಡದಾಗುತ್ತಿದೆʼ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
ನನ್ನ ಪತ್ನಿ ನನ್ನಿಂದ ದೂರವಾಗಿದ್ದಾಳೆ. ಈಗಾಗಲೇ ಪ್ರತಿತಿಂಗಳು ನನ್ನಿಂದ 40 ಸಾವಿರ ರೂಪಾಯಿ ಪಡೆಯುತ್ತಿದ್ದಾಳೆ. ಆಕೆಯೂ ಒಂದು ಕಂಪನಿಯಲ್ಲಿ ಕೆಲಸ ದುಡಿಯುತ್ತಿದ್ದಾಳೆ..ಇಷ್ಟೆಲ್ಲ ಇದ್ದರೂ ನನ್ನಿಂದ 2-4 ಲಕ್ಷ ರೂ.ಹಣ ಕೇಳುತ್ತಿದ್ದಾಳೆʼ ಎಂದು ಅತುಲ್ ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ʼನನ್ನ ವಿರುದ್ಧ ಆಕೆ 9 ಕೇಸ್‌ಗಳನ್ನ ಹಾಕಿದ್ದಾಳೆ. 2022ರಿಂದಲೂ ನಿರಂತರವಾಗಿ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಕೇಸ್ ಹಾಕುತ್ತಲೇ ಬಂದಿದ್ದಾಳೆ. ಸಾಕಷ್ಟು ಆರೋಪಗಳನ್ನೂ ಮಾಡಿ ಬಳಿಕ ಈ ಕೇಸ್‌ಗಳನ್ನ ವಾಪಸ್ ತೆಗೆದುಕೊಂಡಿದ್ದಾಳೆ. ಆದರೆ ದಿನೇದಿನೆ ಇದೆಲ್ಲ ಕಗ್ಗಂಟಾಗುತ್ತಿದೆ ಎಂದು ಅತುಲ್ ಅವರು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ.
ತಾನು ಏನೇನು ಮಾಡಬೇಕು ಎಂದು ಪಟ್ಟಿ ಸಿದ್ಧಪಡಿಸಿದ್ದ ಅತುಲ್ ಸುಭಾಷ್, ಅದರಂತೆ ಬಾಕಿಯಿರುವ ಪಾವತಿಗಳು, ಮಾಡಬೇಕಿರುವ ಕೆಲ ಕೆಲಸಗಳನ್ನ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದರು. ಅಲ್ಲದೆ ತನ್ನ ಸಾವಿನ ಬಳಿಕ ನೋಡಬೇಕಿರುವ ಡೆತ್ ನೋಟ್, ಮನೆಯ ಕೀ ಎಲ್ಲಿರಿಸಲಾಗಿದೆ, ಯಾವ್ಯಾವ ಕೆಲಸಗಳನ್ನ ಪೂರ್ಣಗೊಳಿಸಲಾಗಿದೆ ಎಂಬುದರ ಮಾಹಿತಿ ಸಿಗುವಂತೆ ಪಟ್ಟಿಯಲ್ಲಿ ತಿಳಿಸಿದ್ದರು. ಹಾಗೂ ಗಿಫ್ಟ್ ಬಾಕ್ಸ್ ಮನೆಯಲ್ಲಿಟ್ಟು, ತನ್ನ ನಾಲ್ಕು ವರ್ಷದ ಪುತ್ರನಿಗೆ ತಲುಪಿಸುವಂತೆ ಸೂಚಿಸಿದ್ದರು. ನಂತರ 'JUSTICE IS DUE' ಎಂಬ ಬರಹವಿರುವ ಪೋಸ್ಟರ್, ಹಾಗೂ ಪೂರ್ಣಗೊಳಿಸಿರುವ ತನ್ನ ಕೆಲಸಗಳ ಪಟ್ಟಿಯನ್ನ ಗೋಡೆಗೆ ಅಂಟಿಸಿ ಆತ್ಮಹತ್ಯೆಗೆ ಶರಣಾಗಿದ್ದರು.
ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ #justiceforatul #justiceisdue ಹ್ಯಾಶ್ ಟ್ಯಾಗ್ ಬಳಸಿ ಪೋಸ್ಟ್ ಪ್ರಕಟಿಸುವ ಮೂಲಕ ಅತುಲ್ ಆಪ್ತರು, ಸ್ನೇಹಿತರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಅತುಲ್ ಕೊನೆ ಆಸೆಗಳು
ತಮ್ಮ ಪ್ರತಿ ಕೇಸ್‌ಗಳೂ ಕೋರ್ಟ್‌ನಲ್ಲಿ ನಡೆಯುವಾಗ ಅದು ಲೈವ್ ಟೆಲಿಕಾಸ್ಟ್ ಆಗಬೇಕು . ದೇಶದ ಕಾನೂನನ್ನ ಮಹಿಳೆಯರು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಜಗತ್ತಿಗೇ ಗೊತ್ತಾಗಬೇಕು ಎಂದಿದ್ದಾರೆ. ಇನ್ನು ತನ್ನ ಮಗುವನ್ನ ನನ್ನ ಅಪ್ಪ ಅಮ್ಮನೇ ನೋಡಿಕೊಳ್ಳಲಿ..ನಾನು ಸತ್ತ ಮೇಲೆ ನನ್ನ ಪತ್ನಿಯಾಗಲೀ, ಅವಳ ಕುಟುಂಬದವರೇ ಆಗಲೀ ನನ್ನ ಮೃತದೇಹದ ಬಳಿ ಬರಬಾರದು ಎಂದು ಬರೆದಿಟ್ಟಿದ್ದಾರೆ.
ಇನ್ನು ತಮಗೆ ಉತ್ತರ ಪ್ರದೇಶದ ಕೋರ್ಟ್‌ನಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲ. ಹಾಗಾಗಿ ಬೆಂಗಳೂರಿನ ಕೋರ್ಟ್‌ನಲ್ಲೇ ವಿಚಾರಣೆ ನಡೆಯಲಿ. ನನಗೆ ಕಿರುಕುಳ ನೀಡಿದವರಿಗೆ ಶಿಕ್ಷೆ ಆಗುವವರೆಗೂ ನನ್ನ ಅಸ್ತಿ ವಿಸರ್ಜನೆ ಮಾಡಬೇಡಿ..ಹಾಗೊಮ್ಮೆ ಅವರಿಗೆ ಶಿಕ್ಷೆ ಆಗಲೇ ಇಲ್ಲ ಎಂದರೆ, ಅದೇ ಕೋರ್ಟ್‌ನ ಮುಂಭಾಗದಲ್ಲಿ ಇರುವ ಯಾವುದಾದರೂ ಚರಂಡಿಗೆ ನನ್ನ ಅಸ್ತಿಯನ್ನ ಚೆಲ್ಲಿಬಿಡಿ ಎಂದೂ ನೋವಿನಿಂದ ಬರೆದಿಟ್ಟಿದ್ದಾರೆ. ಸದ್ಯ ಅತುಲ್ ಡೆತ್ ನೋಟ್ ಮತ್ತು ಸಾವು ಬಹಳ ಚರ್ಚೆಗೆ ಕಾರಣವಾಗಿದೆ.
PublicNext
11/12/2024 12:35 pm