ಬೆಂಗಳೂರು: ಆಸ್ತಿ ವಿಚಾರಕ್ಕಾಗಿ ಪಾಪಿ ಅಣ್ಣನೊಬ್ಬ ತಮ್ಮನನ್ನೇ ಚಾಕುವಿನಿಂದ ಇರಿದು ಕಟ್ಟಡದಿಂದ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. 31 ವರ್ಷದ ವಿನಯ್ ಕೊಲೆಯಾದ ದುರ್ದೈವಿ. ಕಾಮಾಕ್ಷಿಪಾಳ್ಯದ ಕಾವೇರಿಪುರಂನಲ್ಲಿ ಘಟನೆ ನಡೆದಿದೆ.
ಸಹೋದರರಾದ ಸತೀಶ್ ಹಾಗೂ ವಿನಯ್ ಇಬ್ಬರ ನಡುವೆ ಭಾಗವಾಗಬೇಕಿದ್ದ ಸ್ವಂತ ಮನೆ ಸೇರಿ ಆಸ್ತಿಯೂ ಸಹ ಇತ್ತು. ಇತ್ತ ಅಣ್ಣ ಸತೀಶ್ ಮದುವೆಯಾಗಿ ಹೆಂಡತಿ ಜೊತೆ ವಾಸವಿದ್ದ. ಕೊಲೆಯಾದ ವಿನಯ್ ಕುಮಾರ್ ತಂದೆ ತಾಯಿ ಜೊತೆ ಇದ್ದುಕೊಂಡು ಅವರನ್ನು ನೋಡಿಕೊಳ್ಳುತ್ತಿದ್ದ. ಸತೀಶ್ ಬೇರೆ ಮನೆ ಮಾಡಿದ ಮೇಲೆ ಆಸ್ತಿ ವಿಚಾರವಾಗಿ ಅಣ್ಣ ತಮ್ಮನ ನಡುವೆ ಆಗಾಗ ಜಗಳವಾಗುತ್ತಿತ್ತು. ಆದರೆ ತಂದೆ ತಾಯಿ ಬುದ್ಧಿ ಹೇಳಿ ಇಬ್ಬರನ್ನು ಸುಮ್ಮನಾಗಿಸುತ್ತಿದ್ದರು.
ಇತ್ತಿಚೇಗೆ ವಿನಯ್ ಗೆ ಯುವತಿಯೊಬ್ಬಳ ಜೊತೆ ನಿಶ್ಚಿತಾರ್ಥವಾಗಿ ಮುಂದಿನ ತಿಂಗಳು ಮದುವೆ ತಯಾರಿಯಲ್ಲಿದ್ದ. ಇದೇ ನೋಡಿ ಅಣ್ಣ ಸತೀಶನ ಕಣ್ಣು ಕೆಂಪಗಾಗಿಸಿದ್ದು. ವಿನಯ್ ಮದುವೆಯಾದರೆ ಗಂಡ ಹೆಂಡತಿ ಸೇರಿ ಆಸ್ತಿ ಕೇಳುತ್ತಾರೆ. ಆಗ ಆಸ್ತಿ ಭಾಗ ಮಾಡಿ ತಮ್ಮನಿಗೂ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತೆ ಅಂತಾ ಯೋಚಿಸತೊಡಗಿದ್ದ. ಹೇಗಾದ್ರೂ ಮಾಡಿ ವಿನಯ್ ನನ್ನು ಕೊಂದರೆ ಇಡೀ ಆಸ್ತಿಯನ್ನು ತಾನೇ ಅನುಭವಿಸಬಹುದು ಅಂತಾ ಪ್ಲಾನ್ ಮಾಡಿದ್ದ. ಹೀಗಾಗಿ ನಿನ್ನೆ ತಮ್ಮ ವಿನಯ್ ರೂಮ್ ಗೆ ತೆರಳಿದ ಸತೀಶ್, ಜಗಳ ತೆಗೆದಿದ್ದಾನೆ. ಜಗಳದ ಭರದಲ್ಲಿ ಮೊದಲೇ ಪ್ಲಾನ್ ಮಾಡಿದ ಹಾಗೆ ಚೂರಿಯಿಂದ ಇರಿದು ವಿನಯ್ ನನ್ನು ಕಟ್ಟಡದಿಂದ ತಳ್ಳಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಇನ್ನೂ ವಿನಯ್ ನನ್ನ ಸತೀಶ್ ಕೊಂದಿದ್ದಾನೆ ಎಂದು ತಾಯಿ ಜಯಮ್ಮ ನೀಡಿದ ದೂರಿನನ್ವಯ ಸತೀಶನನ್ನ ಬಂಧಿಸಿರುವ ಕಾಮಾಕ್ಷಿಪಾಳ್ಯ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
PublicNext
20/07/2022 06:53 pm