ಬೆಂಗಳೂರು: ಮಾಡೆಲಿಂಗ್ ಆಸೆ ಇಟ್ಟು ಕನಸು ಕಾಣ್ತಿರೋ ಯುವತಿಯರು, ಈ ಸ್ಟೋರಿ ನೀವು ನೋಡ್ಲೇಬೇಕು. ಫೇಸ್ ಬುಕ್, ಇನ್ ಸ್ಟಾಗ್ರಾಂ ನಲ್ಲಿ ನಿಮ್ಮ ಕನಸನ್ನೇ ಬಂಡವಾಳ ಮಾಡಿಕೊಳ್ಳೋ ಕಳ್ಳರಿದ್ದಾರೆ ಎಚ್ಚರ!
ಇನ್ ಸ್ಟಾಗ್ರಾಂನಲ್ಲಿ ಹುಡುಗಿ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಮಾಡೆಲ್ ಮಾಡಿಸುವುದಾಗಿ ಯುವತಿಯರನ್ನು ನಂಬಿಸಿ, ಬೆತ್ತಲೆ ಫೋಟೊ ಪಡೆದು ಬ್ಲ್ಯಾಕ್ ಮೇಲ್ ಮಾಡ್ತಿದ್ದ ಖತರ್ನಾಕ್ ಆರೋಪಿಯನ್ನು ಬೆಂಗಳೂರಿನ ಹಲಸೂರು ಪೊಲೀಸರು ಬಂಧಿಸಿದ್ದಾರೆ.
22 ವರ್ಷದ ಹಲಸೂರು ನಿವಾಸಿ ಪ್ರಪಂಚನ್, ಹುಡುಗಿ ಫೋಟೊ- ಹೆಸರು ಬಳಸಿ ನಕಲಿ ಇನ್ ಸ್ಟಾಗ್ರಾಂ ಖಾತೆ ತೆರೆದಿದ್ದ. ತಾನು ಮಾಡೆಲ್ ಅಂತ ಯುವತಿಯರನ್ನು ಪರಿಚಯಿಸಿ, ಸ್ನೇಹ ಸಂಪಾದನೆ ಮಾಡ್ತಿದ್ದ. ಈತನ ಮಾತು ನಂಬಿ ಇನ್ ಸ್ಟಾ ಗ್ರಾಂ ಖಾತೆಗೆ ಕೆಲವು ಯುವತಿಯರು ಭೇಟಿ ನೀಡ್ತಿದ್ರು, ಮೆಸೇಜ್ ಕೂಡ ಮಾಡ್ತಿದ್ರು. ಯುವತಿಯರು ಸಂಪರ್ಕಿಸಿದ ಕೂಡಲೇ ಮಾಡೆಲಿಂಗ್ ಗೆ ಅಗತ್ಯವಿರುವ ಅರೆಬೆತ್ತಲೆ ಪೋಟೊ ಕಳುಹಿಸುವಂತೆ ಸೂಚಿಸುತ್ತಿದ್ದ ಈ ಐನಾತಿ.
ಬಳಿಕ ಹೀಗೆ ಬಂದ ಫೋಟೊವನ್ನು ಅಶ್ಲೀಲ ಚಿತ್ರಗಳಿಗೆ ಮಾರ್ಫಿಂಗ್ ಮಾಡಿ ಪುನಃ ಅದೇ
ಯುವತಿಯರ ವಾಟ್ಸ್ ಆ್ಯಪ್ ಗೆ ಕಳುಹಿಸಿ ಮತ್ತೆ ಬೆತ್ತಲೆ ವೀಡಿಯೊ, ಫೋಟೋಗೆ ಬೇಡಿಕೆ ಇಡ್ತಿದ್ದ. ಕೊಡದಿದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದ. ಇದರಿಂದ ಆತಂಕಕ್ಕೊಳಗಾದ ಯುವತಿಯರು ಫೋಟೊ- ವೀಡಿಯೊ ಕಳುಹಿಸಿದ್ದಾರೆ.
ಸದ್ಯ ಆರೋಪಿಯಿಂದ ವಂಚನೆಗೊಳಗಾದ ಯುವತಿಯೊಬ್ಬಳು 2021 ನವೆಂಬರ್ ನಲ್ಲಿ ಹಲಸೂರು ಠಾಣೆಗೆ ದೂರು ನೀಡಿದ್ದಳು. ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಯುವತಿಯರಿಗೂ ವಂಚಿಸಿರುವುದು ಬಯಲಾಗಿದೆ.
ಆರೋಪಿಯ 3 ಮೊಬೈಲ್ ನಲ್ಲಿದ್ದ ಸಾವಿರಕ್ಕೂ ಹೆಚ್ಚು ಫೋಟೊ, ವೀಡಿಯೊ ಪೊಲೀಸರು ಸೀಜ್ ಮಾಡಿದ್ದಾರೆ. ಈತ ಇದೇ ರೀತಿ 35 ಯುವತಿಯರಿಗೆ ವಂಚಿಸಿರೋದು ಬೆಳಕಿಗೆ ಬಂದಿದೆ.
PublicNext
12/01/2022 05:53 pm