ದೊಡ್ಡಬಳ್ಳಾಪುರ : ಕನ್ನಡ ಮಾತನಾಡುತ್ತಾರೆಂಬ ಕಾರಣಕ್ಕೆ ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಆಂಧ್ರ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ವಿದ್ಯಾರ್ಥಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ದೇವನಹಳ್ಳಿ ರಸ್ತೆಯಲ್ಲಿರುವ ಗೀತಂ ವಿಶ್ವವಿದ್ಯಾಲಯದಲ್ಲಿ ಕಳೆದ ಭಾನುವಾರ ಈ ಘಟನೆ ನಡೆದಿದೆ. ಕಂಪ್ಯೂಟರ್ ಸೈನ್ಸ್ ಓದುತ್ತಿರುವ ಸುಮಾರು 10ಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆಂಧ್ರ ಮೂಲದ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಹಲ್ಲೆ ನಡೆಸಿದ್ದಾರೆ ಎನ್ನಲಾದ ಐವರು ವಿದ್ಯಾರ್ಥಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೀತಾಂ ವಿಶ್ವವಿದ್ಯಾಲಯದಲ್ಲಿ ಶೇಕಡಾ 90ರಷ್ಟು ನೆರೆಯ ಆಂಧ್ರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರು ಸ್ಥಳೀಯ ಯುವಕರನ್ನು ಗುರಿಯಾಗಿಸಿ ಹಲ್ಲೆ ನಡೆಸುತ್ತಿದ್ದಾರೆ. ವಿವಿ ಸಂಪೂರ್ಣ ತೆಲುಗುಮಯವಾಗಿದ್ದು, ಕನ್ನಡ ರಾಜ್ಯೋತ್ಸವ ಆಚರಿಸುತ್ತಿಲ್ಲ. ಕನ್ನಡ ಮಾತನಾಡುವ ಪರಿಸ್ಥಿತಿ ಇಲ್ಲಿಲ್ಲ, ಅಲ್ಲದೆ ಕಾರ್ಯಕ್ರಮಗಳಲ್ಲಿ ಚಂದ್ರಬಾಬು ನಾಯ್ಡು, ಜಗಮೊಹನ ರೆಡ್ಡಿ ಸೇರಿದಂತೆ ತೆಲುಗು ನಟರ ಗುಣಗಾನ ಮಾಡುತ್ತಾರೆ. ಆದರೆ ನಟ ದಿ.ಪುನೀತ್ ರಾಜ್ ಕುಮಾರ್ ಭಾವಚಿತ್ರವನ್ನು ಕಾರ್ಯಕ್ರಮದಲ್ಲಿ ಅಳವಡಿಸಲು ಅವಕಾಶ ನೀಡಲಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
PublicNext
25/04/2022 10:22 pm