ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಮುದ್ದಾದ ನಾಯಿಯನ್ನು ಯುವ ಜೋಡಿಯೊಂದು ಕದ್ದಿತ್ತು. ಆದರೆ, ನಿನ್ನೆ ಮಾಧ್ಯಮಗಳಲ್ಲಿ ಈ ಕಿಲಾಡಿ ಜೋಡಿ ಎಸಗಿದ ಕಳ್ಳತನದ ಸಿಸಿ ಟಿವಿ ವೀಡಿಯೊ ಪ್ರಸಾರವಾಗುತ್ತಿದ್ದಂತೆಯೇ ಭಯಕ್ಕೆ ಬಿದ್ದು ಮಾಲೀಕರಿಗೆ ಶ್ವಾನವನ್ನು ಹಿಂತಿರುಗಿಸಿದ್ದಾರೆ!
ನಟಿ, ಮಾಡೆಲ್ ಹಾಗೂ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದ ನಟಿ ನಿರೂಷಾ ಅವರ ನಾಯಿ ಮರಿಯನ್ನು ಕದ್ದು ತೆಗೆದುಕೊಂಡು ಹೋಗಿದ್ದ ಯುವಜೋಡಿ, ನಟಿ ಅವರ ತಾಯಿಗೆ ರಾತ್ರಿ ಕರೆ ಮಾಡಿ "ನಮ್ಮಿಂದ ತಪ್ಪಾಗಿದೆ, ನಮ್ಮನ್ನು ಕ್ಷಮಿಸಿ ಬಿಡಿ" ಎಂದು ಹೇಳಿ "ತಮ್ಮ ಮನೆಯ ಹತ್ತಿರದಲ್ಲೇ ಇರುವ ದೇವಸ್ಥಾನದ ಹೊರಗೆ ನಿಮ್ಮ ನಾಯಿಯನ್ನು ಬಿಟ್ಟಿದ್ದೇವೆ" ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ.
ಎಂಟು ದಿನಗಳಿಂದ ಕಳೆದು ಹೋಗಿದ್ದ ತಮ್ಮ ಮನೆಯ ಸದಸ್ಯನಂತಿದ್ದ ಶ್ವಾನವನ್ನು ಮರಳಿ ಕಂಡು ನಟಿ ಮತ್ತು ಕುಟುಂಬ ಖುಷಿಯಿಂದ ಮುದ್ದಾಡಿದ್ದೇ ಮುದ್ದಾಡಿದ್ದು. ನಾಯಿ ಕಳೆದು ಹೋದ ದುಃಖದಲ್ಲಿದ್ದ ಮನೆಯವರ ಮುಖದಲ್ಲೀಗ ಮತ್ತೆ ಮಂದಹಾಸ ಮೂಡಿದೆ.
- ನವೀನ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
28/07/2022 08:10 am