ಹಳಿಯಾಳ : ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕಚೇರಿಯ ಒಳ ನುಗ್ಗಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ರೋಗಿಗಳ ಖಾಸಗಿತನಕ್ಕೆ ಧಕ್ಕೆ ತಂದ ಬಗ್ಗೆ ದಾಖಲಾದ ದೂರಿನ ಆಧಾರದಲ್ಲಿ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿರುವ ಘಟನೆ ಹಳಿಯಾಳ ಪಟ್ಟಣದಲ್ಲಿ ನಡೆದಿದೆ.
ಹಳಿಯಾಳ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ದಿವ್ಯಾ ಮಹಾಜನ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಅಧಿಕಾರಿಯ ಜಾತಿ ನಿಂದನೆ ಮಾಡಿರುವ ಕುರಿತು ಆಸ್ಪತ್ರೆಯ ಸುಪರಿಂಟೆಂಡೆಂಟ್ ತೇಜಸ್ವಿನಿ ಅಶೋಕ ಪಾಲೇಕರ ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಿವ್ಯಾಗೆ ಸಾಥ್ ನೀಡಿದ ಗಣೇಶ ರಾಠೋಡ ಆಸ್ಪತ್ರೆಯ ವೈದ್ಯರ ಕೋಣೆಯಲ್ಲಿ ಮಾಡಿರುವ ವಿಡಿಯೋ ಯೂಟ್ಯೂಬ್ ನಲ್ಲಿ ಹಾಕಿ ಪ್ರಸಾರ ಮಾಡುವ ಬೆದರಿಕೆ ಹಾಕಿ, ಮಾನಹಾನಿಯ ಜೊತೆ ತಮ್ಮ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅವಾಚ್ಯ ಶಬ್ಧಗಳನ್ನು ಬಳಸಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಈ ಇಬ್ಬರು ಮೇಲಿಂದ ಮೇಲೆ ಅಧಿಕಾರಿ ವರ್ಗದವರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕುರಿತು ತಾಲೂಕಾಡಳಿತದ ವಿವಿಧ ಅಧಿಕಾರಿಗಳು ಹಳಿಯಾಳ ಕ್ಷೇತ್ರದ ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ಅವರಿಗೆ ದೂರುತ್ತಲೇ ಬಂದಿದ್ದರು. ಅಲ್ಲದೇ ಘಟನೆ ಬಗ್ಗೆ ಸ್ಥಳೀಯವಾಗಿ ಇದ್ದ ಶಾಸಕರಿಗೆ ತಿಳಿದ ಕೂಡಲೇ ಅವರೂ ಕೂಡ ಖಂಡನೆ ವ್ಯಕ್ತಪಡಿಸಿದ್ದು, ಕಾನೂನು ಕ್ರಮ ಜರುಗಿಸಲು ತಿಳಿಸುವ ಮೂಲಕ ವಿನಾಕಾರಣ ಸುಲಿಗೆಗೆ ಇಳಿಯುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
PublicNext
04/02/2025 12:53 pm