ಧಾರವಾಡ: ತಾಯಿ ಭಾರತಿಯ ಸೇವೆ ಮಾಡಿದ ಸಾರ್ಥಕ ಭಾವ.. ಯೋಧನನ್ನು ಕಂಡು ಜೈಕಾರ ಹಾಕುತ್ತಿರುವ ಮಾಜಿ ಸೈನಿಕರು... ಮಗನನ್ನು ಕಂಡು ಸಂತೋಷಗೊಂಡ ತಂದೆ....ಈ ಎಲ್ಲಾ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಧಾರವಾಡ.
ಹೌದು... ಧಾರವಾಡದ ಮಟ್ಟಿ ಪ್ಲಾಟ್ ನಿವಾಸಿಯಾದ ರಮೇಶ ಜಟಿಂಗನ್ನವರ ಎಂಬ ಯೋಧ ಸುದೀರ್ಘ 24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿ ವಾಪಸ್ ಧಾರವಾಡಕ್ಕೆ ಬಂದಿದ್ದಾರೆ.
ನಿವೃತ್ತರಾಗಿ ಬಂದ ಯೋಧ ರಮೇಶ್ ಅವರನ್ನು ಅವರ ಸ್ನೇಹಿತರು ಹಾಗೂ ಇತರ ಮಾಜಿ ಸೈನಿಕರು ತೆರೆದ ಜೀಪ್‌ನಲ್ಲಿ ಧಾರವಾಡದ ಶಿವಾಜಿ ವೃತ್ತದಿಂದ ಅದ್ಧೂರಿ ಮೆರವಣಿಗೆ ಮಾಡಿದರು.
ಇದಕ್ಕೂ ಮುನ್ನ ಯೋಧ ರಮೇಶ್ ಹಾಗೂ ಅವರ ಪತ್ನಿ, ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮೆರವಣಿಗೆ ಮುಖಾಂತರ ತಮ್ಮ ಮನೆಗೆ ತೆರಳಿದರು. ಯೋಧನಿಗೆ ಮಾಜಿ ಸೈನಿಕರು, ಸಂಬಂಧಿಕರು ಹಾಗೂ ಅವರ ಸ್ನೇಹಿತರು ಹೂಮಾಲೆ ಹಾಕಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಯೋಧ ರಮೇಶ, 24 ವರ್ಷ ಭಾರತೀಯ ಸೇನೆಯಲ್ಲಿ ನಾನು ಸಲ್ಲಿಸಿದ ಸೇವೆ ಅವಿಸ್ಮರಣೀಯ. ಸಾಕಷ್ಟು ಜನ ಯುವಕರು ಇಂದು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅದನ್ನೆಲ್ಲ ಬಿಟ್ಟು ಭಾರತೀಯ ಸೇನೆ ಸೇರುವತ್ತ ಯುವಕರು ಗುರಿ ಸಾಧನೆ ಮಾಡಬೇಕು. ಮದ್ರಾಸ್ ರೆಜ್ಮೆಂಟ್ ಮೂಲಕ ಸೇನೆ ಸೇರಿದ ನಾನು ಜಮ್ಮು, ಕಾಶ್ಮೀರ, ಅಸ್ಸಾಂ, ಲಡಾಖ್ ಸೇರಿದಂತೆ ಅನೇಕ ಕಡೆಗಳಲ್ಲಿ ಸೇವೆ ಸಲ್ಲಿಸಿ ವಾಪಸ್ ಬಂದಿದ್ದೇನೆ ಎಂದರು.
ಇನ್ನು ತಮ್ಮ ಪತಿ ದೇಶಸೇವೆ ಸಲ್ಲಿಸಿ ವಾಪಸ್ ಮನೆಗೆ ಬಂದಿದ್ದಕ್ಕೆ ಸಂತಸಗೊಂಡ ಯೋಧ ರಮೇಶ ಅವರ ಪತ್ನಿ, ತಮ್ಮ ಮಗನನ್ನೂ ದೇಶ ಸೇವೆಗೆ ಕಳುಹಿಸುವ ಮಾತುಗಳನ್ನಾಡಿದರು. ಒಟ್ಟಾರೆ ಸುದೀರ್ಘ 24 ವರ್ಷಗಳ ಕಾಲ ದೇಶ ಸೇವೆ ಮಾಡಿ ವಾಪಸ್ ಮನೆಗೆ ಬಂದ ಯೋಧನಿಗೆ ಸ್ನೇಹಿತರು, ಬಂಧು ಬಳಗದವರು ಹಾಗೂ ಮಾಜಿ ಯೋಧರು ಅದ್ಧೂರಿ ಮೆರವಣಿಗೆ ಮಾಡುವ ಮುಖಾಂತರ ಭವ್ಯ ಸ್ವಾಗತ ಕೋರಿ ಯೋಧನಿಗೆ ಗೌರವ ಸಲ್ಲಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/02/2025 05:41 pm