ಸೊರಬ: ತಾಲ್ಲೂಕಿನ ಕಸಬಾ ಹೋಬಳಿ, ಗುಡವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂತನಹಳ್ಳಿ ಗ್ರಾಮದ ಪಾರಂಪರಿಕ ಕಾಡಿಗೆ ದುಷ್ಕರ್ಮಿಗಳು ಲಗ್ಗೆ ಹಾಕಿದ್ದು ಅಪಾರ ಪ್ರಮಾಣದ ಮರಮಟ್ಟುಗಳ ಮಾರಣ ಹೋಮವಾಗಿದೆ.
.ಕಂತನಹಳ್ಳಿ ಸರ್ವೆ ನಂಬರ್ ೮ರಲ್ಲಿ ಒಟ್ಟು ೫೩೩ ಎಕರೆ ಅರಣ್ಯವಿದೆ. ಇದಕ್ಕೆ ತಾಗಿಕೊಂಡು ಸಾರೆಮರೂರು ಗ್ರಾಮದ ಸರ್ವೆ ನಂಬರ್ ೨೭ ರಲ್ಲಿ ೩೫೨ ಎಕರೆ ಅರಣ್ಯವಿದೆ. ಪ್ರಸ್ತುತ ಈ ಸರ್ವೆ ನಂಬರ್‌ಗೆ ತಾಗಿಕೊಂಡು ಕೆಲ ಖಾಸಗಿ ಅಸ್ತಿಯೂ ಇದೆ. ಇದೇ ಸರ್ವೆ ನಂಬರ್‌ನಲ್ಲಿ ಸುಮಾರು ೧೫ ಎಕರೆ ಅತಿಕ್ರಮಣವೂ ಆಗಿದೆ.
ಇಲ್ಲಿ ಒತ್ತೂವರಿ ಅಥವಾ ಅತಿಕ್ರಮಣಕ್ಕಾಗಿ ನಾಶಪಡಿಸಲು ಸಜ್ಜು ನಡೆಯುತ್ತಿದ್ದಂತೆ ಗೋಚರಿಸುತ್ತಿದ್ದು ಬೆಲೆ ಬಾಳುವ ಮರಗಳನ್ನು ಕಟ್ಟಿಗೆಗಾಗಿ ಕತ್ತರಿಸಲಾಗಿದೆ. ಬೃಹತ್ ಪೈಕಸ್ ಮರವನ್ನು ಧರೆಗುರುಳಿಸಿದ್ದು ಸಾವಿರಾರು ಪಕ್ಷಿಗಳ ಆವಾಸ, ಆಹಾರಕ್ಕೆ ಕುತ್ತು ತರಲಾಗಿದೆ. ನೂರಾರು ಪಕ್ಷಿಗಳ ಮೊಟ್ಟೆ, ಮರಿಗಳು ಅಸುನೀಗಿವೆ.
ಈಗ ಕಡಿದುರುಳಿಸಿರುವ ೮೦ಕ್ಕೂ ಹೆಚ್ಚು ಮರಗಳು ಐದಾರು ಎಕರೆ ವಿಸ್ತೀರ್ಣದಲ್ಲಿದ್ದು ಬೆಲೆಬಾಳುವ ಪಾರಂಪರಿಕ ಮರಗಳಾಗಿವೆ. ನಂದಿ, ಹೊನ್ನೆ, ಬಣಗಿ, ಮತ್ತಿ, ಹುಣಾಲು ಮುಂತಾದ ಜಾತಿಯವದ್ದಾಗಿದೆ. ಈ ಮರಗಳ ಕಡಿತಲೆ ವೇಳೆ ಸಾವಿರಾರು ಮುಂಪೀಳಿಗೆ ಸಸ್ಯಗಳು ನಾಶಗೊಂಡಿವೆ.
ಈ ಅತಿಕ್ರಮಣದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಅರಣ್ಯ ಇಲಾಖೆ ಬಾಯಿ ಮುಚ್ಚಿಸಿ ಪ್ರಕರಣವನ್ನು ತಿರುಚಲಾಗುತ್ತಿದೆ ಎಂಬ ಆರೋಪವೂ ಗ್ರಾಮಸ್ಥರಿಂದ ಕೇಳಿ ಬಂದಿದೆ. ಮುಖ್ಯವಾಗಿ ಇದು ನಿರ್ಜನ ಪ್ರದೇಶವೇನಲ್ಲ. ವಾಹನ ಓಡಾಡುವ ರಸ್ತೆ ವ್ಯವಸ್ಥೆ ಇರುವ ಇಲ್ಲಿ ಏನೇ ಚಟುವಟಿಕೆ ನಡೆದರೂ ಗಮನಕ್ಕೆ ಬರುವಂತಿದೆ. ಆದಾಗ್ಯೂ ಅರಣ್ಯ ಇಲಾಖೆ ಗಮನಕ್ಕೆ ಬಾರದಿರುವುದು ಪ್ರಶ್ನಾರ್ಹ ಎನ್ನುತ್ತಾರೆ ಸ್ಥಳೀಯರು.
ಒಂದು ವರ್ಷದ ಈಚೆಗೆ ಸೊರಬದಲ್ಲಿ ಅವ್ಯಾಹತವಾಗಿ ಅರಣ್ಯ ನಾಶವಾಗಿದೆ. ಚಂದ್ರಗುತ್ತಿ ಹೋಬಳಿಯಲ್ಲಿ ಅತಿ ಹೆಚ್ಚು, ಕಸಬಾ, ಉಳವಿ, ಕುಪ್ಪಗಡ್ಡೆ, ಜಡೆ ಭಾಗದಲ್ಲಿ ಒಂದಿಷ್ಟು ಕಾಡು ಅತಿಕ್ರಮಣ, ಮರಗಳ ನಾಶ ಪ್ರಕರಣ ಕಂಡುಬಂದಿದೆ. ಸಾಲದೆಂಬಂತೆ ಚಂದ್ರಗುತ್ತಿ ಭಾಗದಲ್ಲಿ ಅವ್ಯಾಹತ ಅನಧಿಕೃತ ಮರಳು ದಂಧೆಯೂ ನಡೆಯುತ್ತಿದೆ.
ಚಂದ್ರಗುತ್ತಿ ಹೋಬಳಿಯ ಹೊಳೆಮರೂರು, ತೋರಣಗೊಂಡನಕೊಪ್ಪ, ಅಂದವಳ್ಳಿ, ಮುಟಗುಪ್ಪೆ, ಗೊಗ್ಗೆಹಳ್ಳಿ, ಹರಳಿಗೆ, ಕೋಡಂಬಿ ಇನ್ನೂ ಅನೇಕ ಕಡೆ ಅರಣ್ಯ ನಾಶವಾದ ಬಳಿಕ ಇದೀಗ ಕಂತನಹಳ್ಳಿ ಗ್ರಾಮದ ಸನಂ ೮ರ ನಿತ್ಯ ಹರಿದ್ವರ್ಣದ ಸಮೃದ್ಧ ಕಾಡಿನಲ್ಲಿ ಅಪಾರ ಪ್ರಮಾಣದ ಬೆಲೆಬಾಳುವ ಪಾರಂಪರಿಕ ವೃಕ್ಷಗಳನ್ನು ಕಡಿದು ನಾಶಪಡಿಸಲಾಗಿದೆ. ಪರಿಸರಕ್ಕೆ ತುಂಬಲಾರದ ನಷ್ಟವಾಗಿದೆ. ಅರಣ್ಯ ಘಾತುಕರು ಕಾನೂನಿನ ಕುಣಿಕೆಯಿಂದ ನುಣುಚಿಕೊಳ್ಳುವಲ್ಲಿ ಅರಣ್ಯ ಇಲಾಖೆಯೆ ಸಹಕರಿಸುತ್ತಿದೆಯಾ ಎಂಬ ಅನುಮಾನ ಕಾಣಿಸುತ್ತಿದೆ.
ಕೃಷಿ ಜಮೀನುಗಳು ಲೇಔಟ್‌ಗಳಾಗಿ, ಅರಣ್ಯ ಭೂಮಿ ವಾಣಿಜ್ಯ ಬೆಳೆಗಾಗಿ ಪರಿವರ್ತನೆ ಹೊಂದುತ್ತಿರುವ ಸೊರಬದಲ್ಲಿ ಬಹುತೇಕ ಇನ್ನು ಮುಂದೆ ನೀರಿನ ಅಭಾವದ ಜೊತೆಗೆ ಆಹಾರ ಬೆಳೆಗಳು ಸಂಪೂರ್ಣ ಕಾಣೆಯಾಗಲಿದೆ ಎಂದು ಪರಿಸರಾಸಕ್ತ ಅನೇಕ ಅಧ್ಯಯನಕಾರರು ಆತಂಕ ವ್ಯಕ್ತಪಡಿಸಿದ್ದಾರೆ.
PublicNext
28/01/2025 12:36 pm