ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ 30 ಮಂದಿ ಸಾವನ್ನಪ್ಪಿದ್ದಾರೆ. ಈ ವಿಚಾರವಾಗಿ ಕರ್ನಾಟಕ ಕಾಂಗ್ರೆಸ್ ಪಕ್ಷವು, ಉತ್ತರ ಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದೆ.
ಇದೇ ವಿಚಾರವಾಗಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಕರ್ನಾಟಕ ಕಾಂಗ್ರೆಸ್, 'ಕೇಂದ್ರ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರ್ಕಾರಗಳ ಬೇಜವಾಬ್ದಾರಿಯನ್ನು ತೆರೆದಿಟ್ಟ ಕುಂಭಮೇಳದ ಕಾಲ್ತುಳಿತ ದುರಂತ' ಎಂದು ಗಂಭೀರ ಆರೋಪ ಮಾಡಿದೆ.
ಹೌದು. ಮೌನಿ ಅಮಾವಾಸ್ಯೆಯ ದಿನ ಲಕ್ಷಾಂತರ ಮಂದಿ ಯಾತ್ರಿಕರು ಗಂಗಾನದಿಯಲ್ಲಿ ಸ್ನಾನಕ್ಕೆ ನೂಕು ನುಗ್ಗಲು ನಡೆಸಿರುವುದರಿಂದ ಈ ಕಾಲ್ತುಳಿತ ಸಂಭವಿಸಿದೆ. ಮುಂಜಾನೆಯೇ ದುರಂತ ಸಂಭವಿಸಿದ್ದರೂ, ಮಧ್ಯಾಹ್ನದವರೆಗೂ ಸಾವು ನೋವಿನ ಸಂಖ್ಯೆಯನ್ನು ಮುಚ್ಚಿಡುವ ಪ್ರಯತ್ನ ನಡೆಯಿತು. ಆದರೆ ಸಾಲು ಸಾಲಾಗಿ ಬಂದು ಬೀಳುತ್ತಿರುವ ಹೆಣಗಳ ಸಂಖ್ಯೆಯನ್ನು ಮುಚ್ಚಿಡುವುದು ಸ್ಥಳೀಯ ಆಡಳಿತಕ್ಕೆ ಅಷ್ಟು ಸುಲಭವಿರಲಿಲ್ಲ. ಭಕ್ತಿಯ ಘೋಷಗಳು ಕೇಳಬೇಕಾದಲ್ಲಿ ಜನರ ಆಕ್ರಂದನ ಮುಗಿಲು ಮುಟ್ಟಿದೆ. ಎಲ್ಲಕ್ಕಿಂತ ಆತಂಕಕಾರಿ ಸಂಗತಿಯೆಂದರೆ, ಸಾವಿನ ಸಂಖ್ಯೆಯನ್ನು ಗುರುತಿಸಲು ಜಿಲ್ಲಾಡಳಿತ ವಿಫಲವಾಗುತ್ತಿದೆ. ಯಾಕೆಂದರೆ ನೂರಾರು ಹೆಣಗಳು ಗಂಗಾನದಿಯಲ್ಲಿ ತೇಲಿ ಹೋಗಿರುವೆ ಎಂಬ ಮಾತುಗಳು ಕೇಳಿ ಬಂದಿವೆ.
ಬೃಹತ್ ಸಾಂಸ್ಕೃತಿಕ, ಧಾರ್ಮಿಕ ಸಮಾವೇಶವೆಂದು ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಬಣ್ಣಿಸಲ್ಪಟ್ಟಿದ್ದ ಕುಂಭಮೇಳ, ಇದೀಗ ಮೃತ್ಯು ಮೇಳವಾಗಿ ಪರಿಣಮಿಸಿದ್ದರ ಹಿಂದೆ ಜಿಲ್ಲಾಡಳಿತದ ವೈಫಲ್ಯಗಳೂ ಇವೆ. ಕೋಟ್ಯಂತರ ಜನರು ಸೇರುವಲ್ಲಿ ಇಂತಹ ದುರಂತಗಳು ಸಾಮಾನ್ಯ ಎಂದು ಸರಕಾರ ಈ ದುರಂತದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದೆಂದರೆ, ದುರಂತದಲ್ಲಿ ತನ್ನ ಪಾತ್ರವನ್ನು ನೇರವಾಗಿಯೇ ಒಪ್ಪಿಕೊಂಡಂತೆ ಎಂದು ಕಾಂಗ್ರೆಸ್ ವಾದವಾಗಿದೆ.
PublicNext
30/01/2025 11:11 am