ಧಾರವಾಡ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸದಾ ಒಂದಿಲ್ಲೊಂದು ಯಡವಟ್ಟು ಮಾಡಿಕೊಳ್ಳತ್ತಲೇ ಇರುತ್ತದೆ. ಇದೀಗ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಕಾಲೇಜುಗಳ ಒಂದನೇ ಸೆಮಿಸ್ಟರ್ ಪಠ್ಯದಲ್ಲಿ ದೇಶ ವಿರೋಧಿ ಬರಹಗಳನ್ನು ಅಳವಡಿಸಿರುವ ಆರೋಪ ಕರ್ನಾಟಕ ವಿಶ್ವವಿದ್ಯಾಲಯ ವಿರುದ್ಧ ಕೇಳಿ ಬಂದಿದೆ.
ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಮೊದಲ ಸೆಮಿಸ್ಟರ್ ಪಠ್ಯವನ್ನು ರಾಮಲಿಂಗಪ್ಪ ಬೇಗೂರು ಎನ್ನುವವರು ಬರೆದಿದ್ದಾರೆ. ಬೆಳಗು ಎಂಬ ಈ ಪುಸ್ತಕದಲ್ಲಿ ರಾಷ್ಟ್ರೀಯತೆ ಆಚರಣೆಯ ಒಂದು ಸುತ್ತು ಎಂಬ 4ನೇ ಅಧ್ಯಾಯದಲ್ಲಿ ವಿವಾದಿತ ಬರಹ ಬರೆಯಲಾಗಿದೆ. ಭಾರತ ಮಾತೆ ಕೇವಲ ಚಿತ್ರವಾಗಿದೆ. ಅದು ಯಾವುದೇ ಹಿಂದೂ ಮುಸ್ಲಿಂ, ಸಿಖ್ ಕುರುಹು ಅಲ್ಲ. ಇದು ಹಿಂದೂ ಎಂದು ಕಲ್ಪಿತವಾಗಿದೆ. ಭಾರತ ಮಾತಾ ಕೀ ಎಂದು ಯಾರಾದರೂ ಕರೆದರೆ ಅದಕ್ಕೆ ಜೈ ಎನ್ನುತ್ತಾರೆ. ಈ ಜೈ ಎನ್ನುವ ಕಲ್ಪನೆ ಇನ್ನೊಬ್ಬರ ಸೋಲು ನೆನಪಿಸುತ್ತದೆ ಎಂದು ಪಠ್ಯದಲ್ಲಿ ಉಲ್ಲೇಖ ಮಾಡಲಾಗಿದೆ.
ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸೈನಿಕರು ಎಲ್ಲವನ್ನೂ ಮೀರಿ ಜೈ ಎನ್ನುತ್ತಲೇ ಪ್ರಾಣ ಕೊಟ್ಟಿದ್ದಾರೆ. ಪಠ್ಯದಲ್ಲಿ ಈ ರೀತಿ ಬರೆದರೆ ಇದು ಮಕ್ಕಳಿಗೆ ಯಾವ ಸಂದೇಶ ಕೊಟ್ಟಂತಾಗುತ್ತದೆ? ಭಾರತ ಮಾತೆಗೆ ಜೈ ಎನ್ನುವುದಕ್ಕೆ ಹಾಗೂ ಭುವನೇಶ್ವರಿ ದೇವಿಗೂ ಕೂಡ ಪಠ್ಯದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಭುವನೇಶ್ವರಿ ಕೆಲವರಿಗೆ ಮಾತ್ರ ದೇವಿ. ಎಲ್ಲರಿಗೂ ಆಕೆ ದೇವಿಯಲ್ಲ ಎಂಬ ಉಲ್ಲೇಖವನ್ನೂ ಪಠ್ಯದಲ್ಲಿ ಮಾಡಲಾಗಿದೆ. ಸೋನಿಯಾ ಗಾಂಧಿಗೆ ಪ್ರಧಾನಿ ಮಾಡದೇ ಇರುವ ರೀತಿಯಲ್ಲಿ ಪಠ್ಯದಲ್ಲಿ ರಾಜಕೀಯ ಬರಹ ಬರೆದಿದ್ದಾರೆ. ಕೂಡಲೇ ಕರ್ನಾಟಕ ವಿಶ್ವವಿದ್ಯಾಲಯ ಈ ಪಠ್ಯ ಪರಿಷ್ಕರಿಸಬೇಕು ಎಂದು ನ್ಯಾಯವಾದಿ ಅರುಣ ಜೋಶಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಪಠ್ಯದಲ್ಲಿ ಲೇಖಕರು ಭಾರತ ಒಂದು ದೇಶವೇ ಅಲ್ಲ ಎನ್ನುವ ರೀತಿಯಲ್ಲಿ ಬರೆದಿದ್ದಾರೆ. ಮಕ್ಕಳ ಮನಸ್ಸಿನ ಮೇಲೆ ಏಕತೆ ಮೂಡಿಸುವ ದೇಶ ಭಕ್ತಿ ಮೂಡಿಸುವ ಪಠ್ಯ ಬರೆಯಬೇಕಿತ್ತು. ಆದರೆ, ಇಲ್ಲಿ ದೇಶ ವಿರೋಧಿ ಹಾಗೂ ಕಮ್ಯುನಿಸ್ಟ್ ವಿಚಾರ ಹಾಕಲಾಗಿದೆ. ಇದು ದುರ್ದೈವದ ಸಂಗತಿ. ಯಾವುದೇ ವಿಶ್ವವಿದ್ಯಾಲಯ ಇಂತಹ ತಪ್ಪು ಆಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯವಾದಿ ಜೋಶಿ ಮನವಿ ಮಾಡಿದ್ದು, ಈ ವಿಚಾರವಾಗಿ ಸಮಿತಿ ರಚನೆ ಮಾಡಿ ತೀರ್ಮಾನ ತೆಗೆದುಕೊಳ್ಳುವ ವಿಚಾರವನ್ನು ಕರ್ನಾಟಕ ವಿಶ್ವವಿದ್ಯಾಲಯ ಪ್ರಭಾರ ಕುಲಪತಿ ಪ್ರೊ.ಜಯಶ್ರೀ ತಿಳಿಸಿದ್ದಾರೆ.
ಈ ಪಠ್ಯ ದೇಶ ವಿರೋಧ ಪಠ್ಯ. ರಾಮಲಿಂಗಪ್ಪ ಅವರು ಕೋಲಾರದವರು ಎಂಬ ಲೇಖಕರ ಪರಿಚಯ ಪುಸ್ತಕದಲ್ಲಿದೆ. ಪುಸ್ತಕ ಆಯ್ಕೆ ಸಮಿತಿ ಇದನ್ನು ಗಮನಿಸಬೇಕಿತ್ತು. ಸದ್ಯ ಕುಲಪತಿಗಳು ಈ ಪಠ್ಯವನ್ನು ವಾಪಸ್ ಪಡೆಯುವ ವಿಶ್ವಾಸವಿದೆ ಎಂದು ನ್ಯಾಯವಾದಿ ಜೋಶಿ ತಿಳಿಸಿದ್ದು, ಕರ್ನಾಟಕ ವಿಶ್ವವಿದ್ಯಾಲಯ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/01/2025 10:25 pm