ಬೆಂಗಳೂರು: ಲೈಂಗಿಕ ಕಿರುಕುಳ ತಡೆ (PoSH)ಕಾಯ್ದೆಯಡಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪೋಶ್ ಕಮಿಟಿ ರಚನೆಯಾಗಿದೆ. ಕೇರಳದ ಚಿತ್ರರಂಗದಲ್ಲಿ ಯಾವಾಗ ಪಾಶ್ ಕಮಿಟಿ ಸದ್ದು ಮಾಡಿತ್ತೋ ಆಗಿನಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಫೈರ್ ಹೆಸರಿನ ಪಾಶ್ ಕಮಿಟಿ ರಚನೆಗೆ ಒತ್ತಾಯ ಕೇಳಿ ಬಂತು. ಅಂತೂ ಈಗ 7ಜನ ಸದಸ್ಯರ ಪೋಶ್ ಆಂತರಿಕ ಕಮೀಟಿ ರಚನೆಯಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದಿಂದ 3 ಬಾರಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟಿಸ್ ಜಾರಿ ಮಾಡಿ, ಪಾಶ್ ಕಮಿಟಿ ರಚಿಸುವಂತೆ ಸೂಚನೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಪೋಶ್ (POSH-Prevention of Sexual Harassment) ಆಂತರಿಕ ಸಮಿತಿ ರಚಿಸಿ ಅದಕ್ಕೆ ಸದಸ್ಯರನ್ನೂ ನೇಮಕ ಮಾಡಲಾಗಿದೆ.
ಪೋಶ್ ಆಂತರಿಕ ಸಮಿತಿ ಸದಸ್ಯರು:
* ಎಂ. ನರಸಿಂಹಲು
* ಎಂ.ಎನ್. ಕುಮಾರ್
* ಸಾ.ರಾ. ಗೋವಿಂದು
* ಎನ್.ಎಂ ಸುರೇಶ್,
* ಅನ್ನಪೂರ್ಣ-ಎನ್‌ಜಿಒ
* ಬಿ ಎಲ್ ನಾಗರಾಜ್ (ನಾಗಣ್ಣ)
* ಅನಿತಾರಾಣಿ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಬೈಲಾ ಹಾಗೂ ನಿಯಮಾವಳಿ ಪ್ರಕಾರ, ಮಂಡಳಿಯ ಸದಸ್ಯರಾದವರಿಗೆ ಮಾತ್ರ ಮೇಲ್ಕಂಡ ಸಮಿತಿಯು ಅನ್ವಯವಾಗುತ್ತದೆ. ಈ ಅಂಶವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.
ಯಾರಿಗೆ ಕಿರುಕುಳ ಉಂಟಾದರೂ ತಮ್ಮ ಗಮನಕ್ಕೆ ಬಂದು ದೂರು ಕೊಟ್ಟರೆ ಅದನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ಆದೇಶ ಹೊರಡಿಸಿದ್ದಾರೆ.
PublicNext
23/01/2025 07:14 am