ಮುಂಬೈ : ಸೈಫ್‌ಗೆ ನಿಜವಾಗಿಯೂ ಚಾಕುವಿನಿಂದ ಇರಿದಿದ್ದಾನಾ? ಅಥವಾ ಆಕ್ಟಿಂಗಾ ಮಾಡಿದ್ದಾರಾ ಎಂದು ಬಿಜೆಪಿ ಮಹಾರಾಷ್ಟ್ರದ ಮೀನುಗಾರಿಕೆ ಸಚಿವರೂ ಆಗಿರುವ ಬಿಜೆಪಿ ನಾಯಕ ನಿತೇಶ್ ರಾಣೆ ಪ್ರಶ್ನೆ ಮಾಡಿದ್ದಾರೆ.
ಚಾಕು ಇರಿತದಿಂದ ಚೇತರಿಸಿಕೊಂಡು 5 ದಿನಗಳ ಬಳಿಕ ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿರುದ್ಧ ರಾಣೆ ವಾಗ್ದಾಳಿ ನಡೆಸಿದ್ದಾರೆ. ಪುಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತೇಶ್ ರಾಣೆ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯನ್ನು ಪ್ರಶ್ನಿಸಿದ್ದಾರೆ. ಸೈಫ್ ಅಲಿ ಖಾನ್ ಮೇಲಿನ ದಾಳಿ ನಿಜವೇ ಅಥವಾ 54 ವರ್ಷದ ನಟನ ʻಕೇವಲ ನಟನೆಯೇʼ ಎಂದು ಪ್ರಶ್ನೆ ಮಾಡಿದ್ದಾರೆ.
ಸೈಫ್ ಅಲಿ ಖಾನ್ ಡಿಸ್ಚಾರ್ಜ್ ಆದ ನಂತರ ಅವರನ್ನು ನೋಡಿದಾಗ, ಅವರು ನಿಜವಾಗಿಯೂ ಇರಿದಿದ್ದಾರೆಯೇ ಅಥವಾ ನಟಿಸಿದ್ದಾರೆಯೇ ಎಂದು ನನಗೆ ಅನುಮಾನವಾಯಿತು ಎಂದು ಹೇಳಿದ್ದಾರೆ. ಹಾಗೆ , ಮುಂಬೈನಲ್ಲಿ ಬಾಂಗ್ಲಾದೇಶಿಗಳು ಏನು ಮಾಡುತ್ತಿದ್ದಾರೆ ನೋಡಿ. ಅವರ ಧೈರ್ಯ ನೋಡಿ, ಮೊದಲು ಅವರು ಬೀದಿಗಳಲ್ಲಿ ವಾಸಿಸುತ್ತಿದ್ದರು, ಈಗ ಜನರ ಮನೆಗಳಿಗೆ ಪ್ರವೇಶಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಅವರ ಮನೆಗೂ ನುಗ್ಗಿದ್ದಾರೆ. ಬಹುಶಃ ಅವರು ಸೈಫ್ ಅವರನ್ನು ಕರೆದುಕೊಂಡು ಹೋಗಲು ಬಂದಿರಬಹುದು. ಇದು ಒಳ್ಳೆಯ ಬೆಳವಣಿಗೆ, ಕಸ ತೆಗೆಯುವುದು ಒಳ್ಳೆಯದೇ' ಎಂದು ಹೇಳಿದ್ದಾರೆ. ಈ ಮೂಲಕ ಸೈಫ್ ಅಲಿಖಾನ್ ಅವರನ್ನು ಕಸಕ್ಕೆ ಹೋಲಿಸಿ, ವಿವಾದ ಸೃಷ್ಟಿಸಿದ್ದಾರೆ.
ಮುಂದುವರಿದು, ಶಾರುಖ್ ಖಾನ್, ಸೈಫ್ ಅಲಿ ಖಾನ್ ಅವರಂತಹ ‘ಖಾನ್’ಗಳು ಗಾಯಗೊಂಡಾಗ ಎಲ್ಲರೂ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ಅವರಂತಹ ಹಿಂದೂ ನಟ ಚಿತ್ರಹಿಂಸೆಗೊಳಗಾದಾಗ ಯಾರೂ ಏನನ್ನೂ ಹೇಳಲು ಮುಂದೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಹಿಂದೂ ಕಲಾವಿದರ ಬಗ್ಗೆ ಆ ಮುಂಬ್ರಾದ ಜೀತುದ್ದೀನ್ (ಜಿತೇಂದ್ರ ಅವ್ವಾದ್), ಬಾರಾಮತಿಯ ತಾಯಿ (ಸುಪ್ರಿಯಾ ಸುಳೆ) ಎಂದಾದರೂ ಚಿಂತಿಸುವುದನ್ನು ನೋಡಿದ್ದೀರಾ? ಅವರಿಗೆ ಸೈಫ್ ಅಲಿ ಖಾನ್, ಶಾರುಖ್ ಖಾನ್ ಮಗ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಚಿಂತೆಯಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಹಿಂದೂಗಳು ಗಮನಹರಿಸಬೇಕು ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತ ಬಾಂಗ್ಲಾದೇಶದ ಪ್ರಜೆ ಎಂದು ಹೇಳಲಾಗುತ್ತಿದೆ.
PublicNext
23/01/2025 01:52 pm