ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ರಾಜ್ಯ ಸರ್ಕಾರ ಘೋಷಿಸಿದ್ದ ಚಲನಚಿತ್ರ ರಾಜ್ಯ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
2019ರ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ರಾಜ್ಯ ಸರಕಾರವು ಘೋಷಿಸಿದ್ದು, ಕಿಚ್ಚ ಸುದೀಪ್ ಅವರು ʼಅತ್ಯುತ್ತಮ ನಟ’ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ʼಪೈಲ್ವಾನ್’ ಚಿತ್ರಕ್ಕಾಗಿ ತಮಗೆ ಘೋಷಣೆಯಾಗಿದ್ದ ʼಅತ್ಯುತ್ತಮ ನಟʼ ಪ್ರಶಸ್ತಿಯನ್ನು ನಟ ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ.
ʼಪೈಲ್ವಾನ್’ ಸಿನಿಮಾದಲ್ಲಿನ ತಮ್ಮ ನಟನೆಯನ್ನು ಗುರುತಿಸಿದ್ದಕ್ಕಾಗಿ ಅವರು ಜ್ಯೂರಿಗಳಿಗೆ ಮತ್ತು ರಾಜ್ಯ ಸರಕಾರಕ್ಕೆ ಧನ್ಯವಾದ ತಿಳಿದಿದ್ದಾರೆ. ಅಲ್ಲದೆ, ತಮ್ಮ ಬದಲು ಬೇರೆ ಕಲಾವಿದರಿಗೆ ಈ ಪ್ರಶಸ್ತಿ ಸಲ್ಲಬೇಕು ಎಂದು ಸುದೀಪ್ ಹೇಳಿದ್ದಾರೆ. ಈ ಕುರಿತು ಸುದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಸುದೀಪ್ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಏನಿದೆ?
ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ. ಈ ಗೌರವಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಪ್ರಶಸ್ತಿಗಳನ್ನು ನಾನು ಎಂದೂ ನಿರೀಕ್ಷಿಸಲ್ಲ. ಹಲವು ವರ್ಷಗಳಿಂದ ನಾನು ಪ್ರಶಸ್ತಿ ಸ್ವೀಕರಿಸೋದನ್ನು ನಿಲ್ಲಿಸಿದ್ದೇನೆ. ವೈಯಕ್ತಿಕ ಕಾರಣಗಳಿಗಾಗಿ ನಾನು ಈ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ. ಅನೇಕ ಅರ್ಹ ನಟರು ಸಿನಿಮಾಗಾಗಿ ಕಷ್ಟಪಟ್ಟಿದ್ದಾರೆ. ಅವರಲ್ಲಿ ಒಬ್ಬರು ಈ ಪ್ರಶಸ್ತಿ ಸ್ವೀಕರಿಸುವುದನ್ನು ನೋಡಲು ಖುಷಿ ಆಗುತ್ತದೆ. ನನ್ನ ಗುರಿ ಜನರನ್ನು ರಂಜಿಸುವುದು. ಅದು ಯಾವಾಗಲೂ ಪ್ರಶಸ್ತಿಗಳ ನಿರೀಕ್ಷೆಯಿಲ್ಲದೆಯೇ ಇರುತ್ತದೆ.
ನನ್ನನ್ನು ರಾಜ್ಯ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತಿಯೊಬ್ಬ ಜ್ಯೂರಿ ಸದಸ್ಯರಿಗೆ ಕೃತಜ್ಞನಾಗಿದ್ದೇನೆ. ನನ್ನ ಕಲೆಯನ್ನು ನೀವು ಗುರುತಿಸಿರೋದು ನನ್ನ ಕೆಲಸಕ್ಕೆ ಸಿಕ್ಕಿರುವ ತಕ್ಕ ಪ್ರತಿಫಲ. ನನ್ನ ನಿರ್ಧಾರವು ಬೇಸರವುಂಟು ಮಾಡಬಹುದು. ತೀರ್ಪುಗಾರರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನೀವು ನನ್ನ ಆಯ್ಕೆಯನ್ನು ಗೌರವಿಸುತ್ತೀರಿ ಹಾಗೂ ನಾನು ಆಯ್ಕೆ ಮಾಡಿದ ಹಾದಿಯಲ್ಲಿ ನನ್ನನ್ನು ಬೆಂಬಲಿಸುತ್ತೀರಿ ಎಂದು ನಾನು ನಂಬುತ್ತೇನೆ. ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರ ಗೌರವಾನ್ವಿತ ಸದಸ್ಯರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ನಟ ಸುದೀಪ್ ಬರೆದುಕೊಂಡಿದ್ದಾರೆ.
PublicNext
23/01/2025 07:09 pm