ಖಾನಾಪುರ : ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಜಾರೋಷವಾಗಿ ಮಟ್ಕಾ ದಂಧೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಅಲ್ಲದೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಎಗ್ಗಿಲ್ಲದೇ ಮಟ್ಕಾ ದಂಧೆ ನಡೆಯುತ್ತಿದ್ದು ಈ ಖದೀಮರಿಗೆ ಯಾರ ಭಯವೂ ಇಲ್ಲದಂತಾಗಿದೆ.
ಈ ದಂಧೆಕೋರರು ಕೂಲಿ ಕಾರ್ಮಿಕ ವರ್ಗವನ್ನು ಗುರಿಯಾಗಿಸಿಕೊಂಡು ಈ ಚಟುವಟಿಕೆ ನಡೆಸುತ್ತಿದ್ದಾರೆ. ಚಟಕ್ಕೆ ದಾಸರಾಗಿರುವ ಶ್ರಮಿಕ ವರ್ಗ ಸಾಲದ ಶೂಲಕ್ಕೆ ಸಿಲುಕಿ ಗ್ರಾಮ ತೊರೆಯುವ ಪರಿಸ್ಥಿತಿ ಎದುರಾಗಿದೆ. ಯುವಕರು, ಬಡ ಕೂಲಿ ಕಾರ್ಮಿಕರು ಮಟ್ಕಾ, ಜೂಜಾಟ ದಂಧೆಗಳ ಬಲೆಗೆ ಸಿಲುಕಿರುವುದರಿಂದ ಕುಟುಂಬದ ಮಹಿಳೆಯರು, ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ಎದುರಾಗಿದೆ. ಈ ದಂಧೆಗಳು ಬಡಸ,ಗಜಪತಿ ಕುಕಡೊಳ್ಳಿ ಹಾಗೂ ಖಾನಾಪೂರ ತಾಲೂಕಿನ ಗಾಡಿಕೊಪ್ಪ ಸೇರಿ ಸುತ್ತ ಮುತ್ತಲಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಕೇಳಿಬರುತ್ತಿದೆ.
ಇದನ್ನು ತಡೆಗಟ್ಟಬೇಕಾದ ಪೊಲೀಸ್ ಇಲಾಖೆ ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮನುಷ್ಯನ ಬದುಕನ್ನೇ ಬಲಿ ಪಡೆಯುತ್ತಿರುವ ಈ ದಂಧೆಗಳು ಮಾರಕವಾಗಿ ಪರಿಣಮಿಸುತ್ತಿವೆ. ಮಟ್ಕಾ ಮತ್ತು ಜೂಜಾಟದಿಂದ ಅನೇಕ ಕುಟುಂಬಗಳು ನಲುಗಿ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ದಂಧೆಗೆ ಬ್ರೇಕ್ ಹಾಕಬೇಕು . ನಮ್ಮ ವಾಹಿನಿಯ ವರದಿಗಾರರು ಪ್ರಾಣದ ಹಂಗು ತೊರೆದು ಅಕ್ರಮ ಭೇದಿಸಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ವಹಿಸುತ್ತಿಲ್ಲ. ಇನ್ನಾದರೂ ಮಟ್ಕಾ ದಂಧೆಕೋರರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಾ ಎಂದು ಕಾದು ನೋಡಬೇಕಾಗಿದೆ .
ನಾಗೇಶ್ ನಾಯ್ಕರ್, ಪಬ್ಲಿಕ್ ನೆಕ್ಸ್ಟ್, ಖಾನಾಪೂರ
PublicNext
15/01/2025 09:53 am