ಬೆಳಗಾವಿ: ಸಂಕ್ರಾಂತಿ ದಿನವೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಪಘಾತದ ಶಾಕ್ ಎದುರಾಗಿದೆ. ಇಂದು ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅದೃಷ್ಟವಶಾತ್ ಹೆಬ್ಬಾಳ್ಕರ್ ಹಾಗೂ ಸಹೋದರ ಚನ್ನರಾಜ್ ಪಾರಾಗಿದ್ದಾರೆ. ಬೆಂಗಳೂರಿನಿಂದ ಬೆಳಗಾವಿಗೆ ಹಬ್ಬಕ್ಕೆ ಬರುತ್ತಿದ್ದ ವೇಳೆಯಲ್ಲಿಯೇ ಈ ಘಟನೆ ನಡೆದಿದೆ.
ನಿನ್ನೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಸಿ ಎಲ್ ಪಿ ಸಭೆ ಇತ್ತು. ಸಭೆ ಮುಗಿದ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಬೆಳಗಾವಿಗೆ ತಮ್ಮ ಸರ್ಕಾರಿ ಕಾರ್ ಸಂಖ್ಯೆ ಕೆ ಎ ೦೧ ಜಿಎ ೯೭೭೭ ನಲ್ಲಿ ರಾತ್ರಿ ೧೧ಕ್ಕೆ ಬೆಂಗಳೂರಿನಿಂದ ಹತ್ತಿದ್ದರು. ಪ್ರತಿ ಸಲ ಹೆಬ್ಬಾಳ್ಕರ್ ಬರೋವಾಗ ಬೆಂಗಳೂರಿನ ಕಾರಿನ ಮೂಲಕ ದಾವಣಗೆರೆವರೆಗೆ ಬರ್ತಿದ್ದರು. ಬಳಿಕ ಇಲ್ಲಿನ ವಾಹನ ಚಾಲಕ ಹೋಗಿ ಕರೆದುಕೊಂಡು ಬರ್ತಾ ಇದ್ದರು. ಆದರೆ ಇಂದು ಮಕರ ಸಂಕ್ರಾಂತಿ ಹಿನ್ನೆಲೆ ಕಾರು ಚಾಲಕನಿಗೆ ಬೆಳಗಾವಿಯಲ್ಲಿಯೇ ಇರಲು ಹೇಳಿದ್ದರು. ಇಂದು ತಮ್ಮ ಮನೆ ದೇವರು ಚಿಕ್ಕಹಟ್ಟಿಹೊಳಿಯ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಲು ಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳಲು ಸಹ ಹೇಳಿದ್ದರು. ಹೀಗಾಗಿ ಬೆಳಗಾವಿಯ ಕಾರು ಚಾಲಕ ಹೆಬ್ಬಾಳ್ಕರ್ ಕರೆದುಕೊಂಡು ಬರಲು ಹೋಗಿಲ್ಲ. ಹೀಗಾಗಿ ಬೆಂಗಳೂರಿನ ಕಾರಿನಲ್ಲಿ ಬೆಳಗಾವಿಗೆ ಬರುತ್ತಿದ್ದ ವೇಳೆಯಲ್ಲಿ ಅಂಬಡಗಟ್ಟಿ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಾಯಿ ಅಡ್ಡ ಬಂದಿದೆ. ತಪ್ಪಿಸಲು ಚಾಲಕ ಯತ್ನಿಸಿದ್ದು, ಮತ್ತೊಂದು ನಾಯಿ ಅಡ್ಡ ಬಂದಿದೆ. ತಕ್ಷಣವೇ ಮುಂದೆ ದೊಡ್ಡ ಕ್ಯಾಂಟರ್ ನಿಂತಿರೋದು ಗೊತ್ತಾಗಿದೆ. ಅದನ್ನು ತಪ್ಪಿಸಲು ಸರ್ವಿಸ್ ರಸ್ತೆಗೆ ಇಳಿದು, ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಹೆಬ್ಬಾಳ್ಕರ್ ಕಾರು ಅಪಘಾತ ಹಿನ್ನೆಲೆಯಲ್ಲಿ ದೊಡ್ಡ ಆತಂಕ ಸೃಷ್ಟಿಯಾಗಿತ್ತು, ಆದರೆ ಯಾವುದೇ ಪ್ರಾಣಾಪಾಯ ಇಲ್ಲದೇ ಪಾರಾಗಿದ್ದು, ವೈದ್ಯರು ವಿಶಾಂತ್ರಿಗೆ ಸಲಹೆ ನೀಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಫೋನ್ ಮೂಲಕ ಸಚಿವೆ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದ್ದಾರೆ. ಬೆಳಗಾವಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಹಲವು ನಾಯಕರು ಆರೋಗ್ಯ ವಿಚಾರಿಸಿದ್ರು. ಆಸ್ಪತ್ರೆಯ ಬಳಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ನೂರಾರು ಕಾರ್ಯಕರ್ತರು ಆಗಮಿಸಿ ಆರೋಗ್ಯ ವಿಚಾರಣೆ ಮಾಡಿದ್ರು. ಇನ್ನು ಮಕರ ಸಂಕ್ರಾಂತಿ ದಿನ ಜ್ಯೋತಿಷಿಗಳು ಎಚ್ಚರಿಕೆಯಿಂದ ಇರಲು ಹೇಳಿದ್ರು ಎಂದು ಎಂಎಲ್ ಸಿ ಚನ್ನರಾಜ ಹೊಟ್ಟಿಹೊಳಿ ಹೇಳಿದ್ದಾರೆ.
ಒಟ್ಟಿನಲ್ಲಿ ಘಟನೆ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣವಾ ಅಥವಾ ನಿದ್ದೆ ಮಂಪರು ಕಾರಣವೇ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.
-ಪ್ರಹ್ಲಾದ್ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ
PublicNext
14/01/2025 07:18 pm