ಬೆಳಗಾವಿ: ಸಬ್ಸಿಡಿ ಹೆಸರಿನಲ್ಲಿ ಅಮಾಯಕರನ್ನು ವಂಚಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಹುಕೋಟಿ ವಂಚನೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಮೀಣ ಭಾಗದ ಬಡ ಮಹಿಳೆಯರನ್ನೆ ವಂಚಕರು ಟಾರ್ಗೆಟ್ ಮಾಡುತ್ತಿದ್ದು, ವಂಚಕರ ಜೊತೆಗೆ ಫೈನಾನ್ಸ್‌ಗಳ ಮಾಲೀಕರು ಭಾಗಿ ಆಗಿದ್ದಾರಾ ಎಂಬ ಪ್ರಶ್ನೆ ಈ ಕಾಡುತ್ತಿದೆ. ಒಂದೇ ಕುಟುಂಬದ ನಾಲ್ವರ ವಿರುದ್ಧ 19 ಕೋಟಿ ವಂಚನೆ ಆರೋಪದ ಮೇಲೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹರ್ಷಿ ವಾಲ್ಮೀಕಿ ಮಹಿಳಾ ಸ್ವ-ಸಹಾಯ ಸಂಘದ ಹೆಸರಲ್ಲಿ ಬೆಳಗಾವಿಯ ಯಮನಾಪುರ ನಿವಾಸಿಗಳಾದ ಅಶ್ವಿನಿ ದಡ್ಡಿ, ಹೊಳೆಪ್ಪ ದಡ್ಡಿ, ಸೇವಂತಾ ದಡ್ಡಿ, ಪ್ರಿಯಂಕಾ ದಡ್ಡಿ ವಂಚನೆ ಮಾಡಿದ್ದು, ಎಫ್ಐಆರ್ ದಾಖಲಾಗಿದೆ. ಈ ಕಿಲಾಡಿಗಳು ಬೈಲಹೊಂಗಲ, ಗೋಕಾಕ, ಯಮಕನಮರಡಿ ಸೇರಿ ಹತ್ತಾರು ಗ್ರಾಮಗಳಲ್ಲಿ 7 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ವಂಚನೆ ಮಾಡಿದ್ದಾರೆ. ಸಾಲದ ಹಣ ಎಲ್ಲಿಂದ ಕಟ್ಟೋದು ಎಂದು ವಂಚನೆಗೊಳಗಾದವರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಊರೂರು ಅಲೆದಾಡಿ ಸಬ್ಸಿಡಿ ಲೋನ್ ಯೋಜನೆಯೊಂದಿದೆ ಎಂದು ಕಟ್ಟು ಕಥೆ ಕಟ್ಟಿರುವ ಆರೋಪಿಗಳು, ಒಂದು ಲಕ್ಷ ಸಾಲ ಪಡೆಯಿರಿ, ಅದರ ಕಂತನ್ನು ನಾವೇ ತುಂಬ್ತಿವಿ ಎಂದು ಬುರಡೆ ಬಿಟ್ಟು, ಪಡೆದ ಸಾಲದಲ್ಲಿ ಅರ್ಧದಷ್ಟು ಹಣ ನಮಗೆ ಕೊಟ್ಟರೆ ಸಾಕು ಎಂದು ವಂಚಕರು ಕಂಡಿಷನ್ ಹಾಕುತ್ತಾರೆ. ಹಣದಾಸೆಗೆ ಜನ ಮರಳೋ, ಜಾತ್ರೆ ಮರಳೋ ಎಂಬಂತೆ ಇಡೀ ಊರಿಗೂರೇ ಫೈನಾನ್ಸ್‌ಗಳಲ್ಲಿ ಸಾಲ ಪಡೆದಿದ್ದಾರೆ.
ಹೀಗೆ ಸಾಲ ಪಡೆಯುವ ಮಹಿಳೆಯರು ಅರ್ಧದಷ್ಟು ಹಣ ತಾವಿಟ್ಟುಕೊಂಡು, ಇನ್ನರ್ಧ ಹಣ ದಡ್ಡಿ ಕುಟುಂಬಕ್ಕೆ ಕೊಟ್ಟಿದ್ದಾರೆ. ವಂಚನೆ ಮಾಡಿರುವ ದಡ್ಡಿ ಕುಟುಂಬ ಸದಸ್ಯರು ಸಾಲವನ್ನು ತುಂಬದೇ ನಾಪತ್ತೆಯಾಗಿದ್ದು, ಕೊಟ್ಟ ಸಾಲ ಮರುಪಾವತಿ ಮಾಡುವಂತೆ ಫೈನಾನ್ಸ್ ಸಿಬ್ಬಂದಿ ಮನೆ ಬಾಗಿಲಿಗೆ ಬರುತ್ತಿದ್ದಾರೆ.
ಇನ್ನು ಈ ರೀತಿ ಪ್ರಕರಣಗಳು ಜಿಲ್ಲೆಯಲ್ಲೆ ಹೆಚ್ಚುತ್ತಿದ್ದು ಜನರು ಮೋಸ ಹೋಗಬಾರದು. ಸದ್ಯ ಪ್ರಕರಣದ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸ್ರು ತನಿಖೆ ಕೈಗೊಂಡಿದ್ದಾರೆ.
PublicNext
14/01/2025 08:33 pm