ಧಾರವಾಡ: ಈ ದೇಶಕ್ಕೆ ಜಗತ್ತೇ ಒಪ್ಪಿ, ಅಪ್ಪಿಕೊಳ್ಳುವಂತಹ ಸಂವಿಧಾನ ಕೊಟ್ಟವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್. ಅಂಬೇಡ್ಕರ್ ಅವರ ಬಗ್ಗೆ ಈ ದೇಶದಲ್ಲಿ ಅಪಾರ ಗೌರವವಿದೆ. ಅಂಬೇಡ್ಕರ್ ಕುರಿತಾಗಿ ಯಾರೇ ಅವಹೇಳನಕಾರಿ ಹೇಳಿಕೆ ನೀಡಿದರೂ ಅದನ್ನು ವಿರೋಧಿಸಲೇಬೇಕು. ಆದರೆ, ಅಂಬೇಡ್ಕರ್ ಕುರಿತಾದ ಅವಹೇಳನಕಾರಿ ಹೇಳಿಕೆ ವಿರೋಧಿಸುವ ಭರದಲ್ಲಿ ದಬ್ಬಾಳಿಕೆ ನಡೆಸುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಮೂಡಿದೆ.
ಹೌದು! ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಗುರುವಾರ ದಲಿತ ಪರ ಸಂಘಟನೆಗಳು ಹುಬ್ಬಳ್ಳಿ, ಧಾರವಾಡ ಅವಳಿನಗರ ಬಂದ್‌ಗೆ ಕರೆ ನೀಡಿದ್ದವು. ಈ ಬಂದ್ ಸಂಪೂರ್ಣ ಯಶಸ್ವಿ ಕೂಡ ಆಗಿದೆ.
ಆದರೆ, ಬಂದ್ ಮಧ್ಯೆಯೂ ಕಾರ್ಯಾರಂಭ ಮಾಡಿದ್ದ ಕೆಲ ಶಿಕ್ಷಣ ಸಂಸ್ಥೆಗಳಿಗೆ ಹೋರಾಟಗಾರರು ಮುತ್ತಿಗೆ ಹಾಕಿ ಒತ್ತಾಯಪೂರ್ವಕವಾಗಿ ಅವುಗಳನ್ನು ಬಂದ್ ಮಾಡಿಸಿದ್ದಾರೆ. ಪ್ರತಿ ಸಾರಿ ಬೇರೆ ಬೇರೆ ವಿಷಯಕ್ಕೆ ಬಂದ್ ಕರೆ ಕೊಟ್ಟಾಗಲೂ ಪ್ರತಿಭಟನಾಕಾರರು ಒತ್ತಾಯ ಪೂರ್ವಕವಾಗಿ ಅಂಗಡಿ, ಮುಂಗಟ್ಟು ಬಂದ್ ಮಾಡಿಸಿಯೇ ಮಾಡಿಸುತ್ತಾರೆ. ಆದರೆ, ಇಂದು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವಾಗ ದಬ್ಬಾಳಿಕೆ ಜೋರಾಗಿಯೇ ಇತ್ತು.
ಇಡ್ಲಿ, ವಡೆ ಮಾರಿ ಬದುಕು ನಡೆಸುವ ವ್ಯಕ್ತಿಗಂತೂ ಸಾರ್ವಜನಿಕರ ಮಧ್ಯೆಯೇ ಕಪಾಳಮೋಕ್ಷ ಮಾಡಿದ್ದು, ದಬ್ಬಾಳಿಕೆ ಅಲ್ಲದೇ ಮತ್ತೇನು? ಎಂದು ಜನರು ಪ್ರಶ್ನೆ ಮಾಡುವಂತಾಯಿತು. ವಿಚಿತ್ರ ಎಂದರೆ ದಬ್ಬಾಳಿಕೆ ಮುಂದೆ ಪೊಲೀಸರೇ ಮಂಕಾಗಿದ್ದರು.
ಅದು ಹೋಗ್ಲಿ ಬಿಡಿ, ಧಾರವಾಡ ಜಿಲ್ಲಾ ಪಂಚಾಯ್ತಿಗೆ ಬಂದ ಹೋರಾಟಗಾರರು, ಒತ್ತಾಯಪೂರ್ವಕವಾಗಿಯೇ ಜಿಲ್ಲಾ ಪಂಚಾಯ್ತಿ ಸಿಬ್ಬಂದಿಗೂ ಕಚೇರಿ ಬಂದ್ ಮಾಡುವಂತೆ ಹೇಳಿದರು. ನೀಲಿ ಬಣ್ಣದ ಬಾವುಟದಲ್ಲಿ ಅಶೋಕ ಚಕ್ರ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಜೈ ಭೀಮ್ ಎಂಬ ಘೋಷಣೆ ಒಳಗೊಂಡ ಭಾವಚಿತ್ರವನ್ನು ಹೋರಾಟಗಾರರು ನಿರ್ಮಿಸಿ ಆ ಬಾವುಟದ ಮೂಲಕ ಹೋರಾಟ ನಡೆಸಿದ್ದರು.
ಆದರೆ, ಜಿಲ್ಲಾ ಪಂಚಾಯ್ತಿಗೆ ಬಂದಾಗ ಬಾವುಟ ಕಾಣದೇ ಕೇವಲ ಹೋರಾಟಗಾರರ ಕೈಯಲ್ಲಿ ಆ ಬಾವುಟದ ಕೋಲುಗಳು ಮಾತ್ರ ಕಾಣಿಸಿಕೊಂಡವು. ಇನ್ನು ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರನ್ನು ತಳ್ಳಾಡಿ ನೂಕಾಡಿದ್ದು ದರ್ಪವೇ ಸರಿ.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಸಂವಿಧಾನವನ್ನು ನಾವು ಎಷ್ಟು ಗೌರವಿಸುತ್ತೇವೆಯೋ ಅದೇ ಮಾದರಿಯಲ್ಲಿ ನಾವು ಹೋರಾಟ ಹಾಗೂ ಪ್ರತಿಭಟನೆಗಳನ್ನು ನಡೆಸಬೇಕಲ್ಲವೇ? ಗುರುವಾರ ನಡೆದ ಬಂದ್ ವೇಳೆ ಇಷ್ಟೆಲ್ಲ ದರ್ಪಗಳು ನಡೆದರೂ ಪೊಲೀಸರು ಮಾತ್ರ ಮಂಕಾಗಿದ್ದು ಕಂಡು ಬಂತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/01/2025 11:29 pm