ಹುಬ್ಬಳ್ಳಿ: ಅದು ರಾಜ್ಯದ ಎರಡನೇ ಅತಿದೊಡ್ಡ ಮಹಾನಗರವನ್ನೇ ಸ್ತಬ್ಧ ಮಾಡಿರುವ ಹೋರಾಟ. ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆಯೊಂದು ಹುಬ್ಬಳ್ಳಿ ಧಾರವಾಡ ಅವಳಿನಗರವನ್ನೇ ಸಂಪೂರ್ಣ ಬಂದ್ ಮಾಡಿ ಹೋರಾಟ ಮಾಡುವಂತಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅಭಿಮಾನಿಗಳ ಹಾಗೂ ವಿವಿಧ ದಲಿತ ಸಂಘಟನೆಗಳ ನೇತೃತ್ವದ ಹೋರಾಟ ಬಹುದೊಡ್ಡ ಸಂದೇಶಕ್ಕೆ ಸಾಕ್ಷಿಯಾಗಿದೆ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ದ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ಆರೋಪಿಸಿ ಇಂದು ಹುಬ್ಬಳ್ಳಿ ಧಾರವಾಡ ಬಂದ್ ಕರೆ ನೀಡಲಾಗಿತ್ತು. 100ಕ್ಕೂ ಹೆಚ್ಚು ದಲಿತ ಸಂಘಟನೆಗಳು ಕರೆ ನೀಡಿದ ಬಂದ್‌ಗೆ ಕಾಂಗ್ರೆಸ್ ಕೂಡಾ ಬೆಂಬಲ ಸೂಚಿಸಿತ್ತು. ಮುಂಜಾನೆ ಬೆಳಕು ಹರಿಯೋ ವೇಳೆಗೆ ಪ್ರತಿಭಟನೆ ಆರಂಭವಾಗಿತ್ತು. ಈ ಹಿನ್ನಲೆ ವಾಣಿಜ್ಯ ನಗರಿ ಹುಬ್ಬಳ್ಳಿ ಸಂಪೂರ್ಣ ಸ್ತಬ್ಧವಾಗಿತ್ತು. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು.
ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಇನ್ನು ಬಂದ್ ಮಾಹಿತಿ ಇಲ್ಲದೆ ಕೆಲ ವಾಹನಗಳು ನಗರಕ್ಕೆ ಎಂಟ್ರಿಕೊಟ್ಟಿದ್ದವು. ಅಂತಹ ವಾಹನಗಳ ಚಕ್ರದ ಗಾಳಿಯನ್ನು ಬಿಟ್ಟು ಹೋರಾಟಗಾರರು ಆಕ್ರೋಶ ಹೊರಹಾಕಿದ್ದರು. ಇನ್ನೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸಂಪೂರ್ಣ ಬಂದ್ ಆಗಿತ್ತು.
ಬೆಳಗಿನ ಜಾವ ಆರು ಗಂಟೆಗೆ ಹೋರಾಟ ಆರಂಭಿಸಿದ ದಲಿತ ಪರ ಸಂಘಟನೆಗಳು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಶಾಸಕ ಪ್ರಸಾದ್ ಅಬ್ಬಯ್ಯ, ಗುರುನಾಥ ಉಳ್ಳಿಕಾಶಿ ನೇತೃತ್ವದಲ್ಲಿ ಬಹುದೊಡ್ಡ ಹೋರಾಟ ನಡೆದಿದ್ದು, ಅಮಿತ್ ಶಾ ಅಣಕು ಶವಯಾತ್ರೆ, ಪ್ರತಿಕ್ರಿಯೆ ದಹನದ ಮೂಲಕ ವಿನೂತನ ಹೋರಾಟ ಮಾಡಲಾಯಿತು.
ಇನ್ನೂ ಕೆಲ ಅಂಗಡಿಗಳನ್ನು ತೆರೆದ ಹಿನ್ನಲೆ ಹೋರಾಟಗಾರರು ಅಂಗಡಿ ಬಂದ್ ಮಾಡಿಸಿದರು. ವಾಣಿಜ್ಯ ಚಟುವಟಿಕೆಗಳಿಂದ ಜನಜಂಗುಳಿಯಿಂದ ಕೂಡಿರುತ್ತಿದ್ದ ಹುಬ್ಬಳ್ಳಿ ಇವತ್ತು ಬಿಕೋ ಎನ್ನುತ್ತಿತ್ತು. ಕೆಲವರು ಬಸ್ ಇಲ್ಲದೆ ಪರದಾಡಿದ್ದಾರೆ. ಹುಬ್ಬಳ್ಳಿಯ ಪ್ರಮುಖ ರಸ್ತೆಗಳನ್ನು ಕ್ಲೋಸ್ ಮಾಡಲಾಗಿತ್ತು.
ಹುಬ್ಬಳ್ಳಿ ವ್ಯಾಪಾರ ವಹಿವಾಟಿನ ಪ್ರಮುಖ ನಗರವಾದರೂ, ಇಂದು ಜನತಾ ಮಾರ್ಕೆಟ್, ಕೊಪ್ಪಿಕರ ರೋಡ್, ಬಟರ್ ಮಾರ್ಕೆಟ್ ,ಕಾಟನ್ ಮಾರ್ಕೆಟ್ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು. ನಿನ್ನೆ ಸಂಘಟಕರು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದ ಹಿನ್ನಲೆ ವ್ಯಾಪರಿಗಳು ಅಂಗಡಿ ಮುಂಗಟ್ಟು, ಹೋಟೆಲ್ ಬಂದ್ ಮಾಡಿ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಬಸ್ ಮತ್ತು ಹೋಟೆಲ್ ಇಲ್ಲದ ಕಾರಣ ಕೆಲವರು ಪರದಾಡಿದ್ದು,ಬಿಟ್ಟರೆ ಬಹುತೇಕ ಹುಬ್ಬಳ್ಳಿ ಧಾರವಾಡ ಬಂದ್ ಯಶಸ್ವಿಯಾಗಿದೆ.
ಒಟ್ಟಿನಲ್ಲಿ ನಮಗೆ ಅಂಬೇಡ್ಕರ್ ಪ್ಯಾಷನ್ ಅಲ್ಲ,ಅನ್ನ ಅಕ್ಷರ, ಜೀವ ಎಂದು ದಲಿತ ಮುಖಂಡರು ಸೇರಿದಂತೆ ಅಂಬೇಡ್ಕರ್ ಅಭಿಮಾನಿಗಳು ಸಂದೇಶ ರವಾನಿಸಿದ್ದಾರೆ. ಅವಳಿ ನಗರದಲ್ಲಿ ವ್ಯಾಪಕ ಪೊಲೀಸ್ ಬಂದೋ ಬಸ್ತ್ ಕಲ್ಪಿಸಲಾಗಿದ್ದು, ಮುಂಜಾಗೃತ ಕ್ರಮವಾಗಿ 1500ಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿತ್ತು. ಒಟ್ಟಾರೆಯಾಗಿ ಅವಳಿ ನಗರ ಬಂದ್ ಯಶಸ್ವಿಯಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/01/2025 06:21 pm