ಧಾರವಾಡ: ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ನೀಡಿದ್ದಾರೆನ್ನಲಾದ ಹೇಳಿಕೆ ವಿರೋಧಿಸಿ ಇಂದು ಹುಬ್ಬಳ್ಳಿ, ಧಾರವಾಡ ಅವಳಿನಗರ ಬಂದ್ಗೆ ದಲಿತಪರ ಸಂಘಟನೆಗಳು ಕರೆ ನೀಡಿವೆ.
ಬೆಳಿಗ್ಗೆ 6 ಗಂಟೆಯಿಂದಲೇ ದಲಿತಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಧಾರವಾಡದ ಭಾಗಶಃ ಅಂಗಡಿ, ಮುಂಗಟ್ಟುಗಳು ಬಂದ್ ಆಗಿವೆ. ಅಲ್ಲಲ್ಲಿ ತೆರೆಯಲಾಗಿದ್ದ ಹೋಟೆಲ್ಗಳಿಗೆ ನುಗ್ಗಿದ ಪ್ರತಿಭಟನಾಕಾರರು ಅವುಗಳನ್ನು ಒತ್ತಾಯಾಪೂರ್ವಕವಾಗಿ ಬಂದ್ ಮಾಡಿಸಿದ್ದಾರೆ. ಸಂಜೆ 6 ಗಂಟೆವರೆಗೂ ಪ್ರತಿಭಟನೆ ಇರಲಿದ್ದು, ಅಲ್ಲಿಯವರೆಗೆ ಅಂಗಡಿಗಳನ್ನು ತೆರೆದಿದ್ದೇ ಆದಲ್ಲಿ ವಸ್ತುಗಳನ್ನು ಪುಡಿಪುಡಿ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಅಂಗಡಿಕಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಶ್ರೀನಗರ ವೃತ್ತದಲ್ಲಿ ರಸ್ತೆ ಮೇಲೆ ಇಡ್ಲಿ, ಸಾಂಬಾರ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಸ್ಥಳದಿಂದ ಹೋಗುವಂತೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಲ್ಲದೇ ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇನ್ನು ಪ್ರತಿಭಟನೆ ಮಧ್ಯೆಯೂ ಧಾರವಾಡದ ಸರ್.ಸಿದ್ದಪ್ಪ ಕಂಬಳಿ ಕಾನೂನು ಕಾಲೇಜು ಕಾರ್ಯಾರಂಭ ಮಾಡಿದ್ದನ್ನು ಗಮನಿಸಿದ ಪ್ರತಿಭಟನಾಕಾರರು ಆ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿದ್ದಾರೆ. ಅಲ್ಲದೇ ಉಪನ್ಯಾಸಕರೊಂದಿಗೆ ವಾಗ್ವಾದ ನಡೆಸಿ ಉಪನ್ಯಾಸಕರನ್ನೂ ತಳ್ಳಾಡಿ ಕಾಲೇಜು ಬಂದ್ ಮಾಡಿಸಿದ್ದಾರೆ. ಸದ್ಯ ಧಾರವಾಡದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಪ್ರತಿಭಟನಾಕಾರರು ಬೈಕ್ ಮೇಲೆ ಸುತ್ತಾಡಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/01/2025 10:40 am