ಧಾರವಾಡ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಿ, ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಕಾಂಗ್ರೆಸ್ ಟೂಲ್‌ಕಿಟ್‌ನ ಒಂದು ಭಾಗ. ಗುರುವಾರ ನಡೆದ ಹುಬ್ಬಳ್ಳಿ-ಧಾರವಾಡ ಬಂದ್ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾದದ್ದು. ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆ ಎನ್ನುವುದಾದರೆ ಈ ಕುರಿತು ನಾನು ಬಹಿರಂಗ ಚರ್ಚೆಗೆ ಸಿದ್ಧ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷವು ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಮಾಡಿರುವಷ್ಟು ಹಿಂಸೆ, ಅವಮಾನವನ್ನು ಬೇರೆ ಯಾರೂ ಮಾಡಿಲ್ಲ. ಅದನ್ನು ಸ್ವತಃ ಅಂಬೇಡ್ಕರ್ ಅವರೇ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಸುಡುವ ಮನೆ ಎಂಬುದಾಗಿ ಅವರೇ ಹೇಳಿದ್ದರೂ ಕೆಲವು ಸಂಘಟನೆಗಳು ಇದೇ ಕಾಂಗ್ರೆಸ್ ಜೊತೆ ಕೈ ಜೋಡಿಸಿರುವುದು ವಿಪರ್ಯಾಸ. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಮಾಡಿರುವ ಅವಮಾನ ಈ ಸಂಘಟನೆಗಳಿಗೆ ಗೊತ್ತಿಲ್ಲವೇ?
ನಿರಂತರ ಅವಮಾನ, ಶೋಷಣೆಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಸಚಿವ ಸ್ಥಾನದಿಂದ ರಾಜೀನಾಮೆ ನೀಡುವಂತೆ ಮಾಡಿದ್ದೇ ಕಾಂಗ್ರೆಸ್ ಪಕ್ಷ. 1952ರಲ್ಲಿ ಲೋಕಸಭೆಗೆ ಜರುಗಿದ ಮೊದಲ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂಬೇಡ್ಕರ್ ಅವರ ವಿರುದ್ಧ ಕಾಂಗ್ರೆಸ್ ಪಕ್ಷವು ನಾರಾಯಣ ಸದೋಬ ಕರ್ಜೋಳ್ಕರ್ ಎಂಬುವರನ್ನು ನಿಲ್ಲಿಸಿ, 15,000 ಮತಗಳಿಂದ ಸೋಲಿಸಿತು. ನಂತರ 1954ರಲ್ಲಿ ನಡೆದ ಉಪ ಚುನಾವಣೆಯಲ್ಲೂ ಸ್ವತಃ ಅಂದಿನ ಪ್ರಧಾನಿ ನೆಹರು ಅವರೇ, ಖುದ್ದು ಕ್ಷೇತ್ರದಾದ್ಯಂತ ಬಾಬಾ ಸಾಹೇಬರ ವಿರುದ್ಧ ಪ್ರಚಾರ ನಡೆಸಿ ಸೋಲಿಸಿದರು. ಈ ಮೂಲಕ ಕೇವಲ ಅಂಬೇಡ್ಕರ್ ಅವರನ್ನಷ್ಟೇ ಅಲ್ಲದೇ ದಲಿತರು ಮತ್ತು ಶೋಷಿತರ ಧ್ವನಿಯನ್ನೇ ಸಂಸತ್ತಿನಿಂದ ಹೊರಗಿಟ್ಟಿದ್ದು ಇದೇ ಕಾಂಗ್ರೆಸ್.
ಅಂಬೇಡ್ಕರ್ ನಿಧನದ ನಂತರವೂ ಕಾಂಗ್ರೆಸ್‍ಗೆ ಅವರ ಮೇಲಿನ ದ್ವೇಷಭಾವನೆ ತಗ್ಗಲಿಲ್ಲ. ಅವರು ನಿಧನರಾದಾಗ ಸಮಾಧಿಗೆ ಒಂದಿಚೂ ಜಾಗ ನೀಡದೇ ಅವಮಾನಿಸಿದ್ದು ಕಾಂಗ್ರೆಸ್ ಪಕ್ಷ. ಬಾಬಾಸಾಹೇಬರು ರಚಿಸಿದ ಸಂವಿಧಾನ ಧಿಕ್ಕರಿಸಿ ತುರ್ತು ಪರಿಸ್ಥಿತಿ ಹೇರಿದ್ದು ಬಿಟ್ಟರೆ ಅಂಬೇಡ್ಕರ್ ವಿಚಾರದಲ್ಲಿ ಕಾಂಗ್ರೆಸ್ ಮಾಡಿದ್ದಾದರೂ ಏನು?
ಬಾಬಾಸಾಹೇಬರಿಗೆ ಭಾರತ ರತ್ನ ಗೌರವ ನೀಡುವುದರಿಂದ ಹಿಡಿದು ಅವರ ಜೀವನದೊಂದಿಗೆ ನಂಟು ಹೊಂದಿದ್ದ ಪಂಚಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ್ದೇ ಬಿಜೆಪಿ ಪಕ್ಷ. ಮಾನ್ಯ ಮೋದಿಜೀಯವರು ಸಂವಿಧಾನದ ಚಿರಸ್ಮರಣೆಗೆ ನವೆಂಬರ್ 26 ರಂದು ಸಂವಿಧಾನ ದಿನಾಚರಣೆ ಎಂದು ಘೋಷಿಸಿದ್ದಾರೆ. ಬಿಜೆಪಿ ಪಕ್ಷವು ಅಂಬೇಡ್ಕರ್ ಮತ್ತು ಸಂವಿಧಾನವನ್ನು ಸದಾ ಗೌರವಿಸುತ್ತಲೇ ಬಂದಿದೆ. ಈ ಕುರಿತು ನಾನು ಯಾವುದೇ ವೇದಿಕೆಯಲ್ಲೂ ಬಹಿರಂಗ ಚರ್ಚೆಗೆ ಸಿದ್ಧ ಎಂದು ಬೆಲ್ಲದ ತಿಳಿಸಿದ್ದಾರೆ.
Kshetra Samachara
09/01/2025 05:30 pm