ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಾರ್ಚ್ ಅಂತ್ಯದೊಳಗೆ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ - ತುಷಾರ್ ಗಿರಿನಾಥ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕರ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆ ಮಾಡಿರುವ ಪೌರಕಾರ್ಮಿಕರಿಗೆ ಮಾರ್ಚ್ 2025ರ ಅಂತ್ಯದೊಳಗಾಗಿ ನೇಮಕಾತಿ ಆದೇಶವನ್ನು ನೀಡಲಾಗುವುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ತಿಳಿಸಿದ್ದಾರೆ.

ಪೌರಕಾರ್ಮಿಕರ ಪಿತಾಮಹ ಐ.ಪಿ.ಡಿ ಸಾಲಪ್ಪ ಅವರ ಜನ್ಮ ದಿನಾಚರಣೆ ಅಂಗವಾಗಿ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಯಂ ಮಾಡಿಕೊಳ್ಳುತ್ತಿರುವ ಪೌರಕಾರ್ಮಿಕರ ಪೈಕಿ ಪೊಲೀಸ್ ತಪಾಸಣೆ ಹಾಗೂ ಮೀಸಲಾತಿ ಪ್ರಮಾಣ ಪತ್ರಗಳ ಸಿಂಧುತ್ವ ಕಾರ್ಯ ನಡೆಯುತ್ತಿದ್ದು, ಆ ಪ್ರಕ್ರಿಯೆಯನ್ನು ಮಾರ್ಚ್ 2025ರ ಅಂತ್ಯದೊಳಗಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಐ.ಪಿ.ಡಿ ಸಾಲಪ್ಪ ಅವರು 1929ರಲ್ಲಿ ಜನಿಸಿದ್ದು, ಭಾರತ ಸ್ವಾತಂತ್ರ್ಯದ ಹೋರಾಟದಲ್ಲಿ ಸಕ್ರಿಯವಾಗಿ ಹೋರಾಟ ನಡೆಸಿಕೊಂಡು ಬಂದವರು. ಬಿನ್ನಿಪೇಟೆಯಿಂದ ಶಾಸಕರಾಗಿ ಕಾರ್ಯನಿರ್ವಹಿಸಿದವರು. ಪೌರಕಾರ್ಮಿಕರ ಜೀವನದ ಸ್ಥಿತಿಗತಿಗಳನ್ನು ಬಹಳ ಹತ್ತಿರದಿಂದ ತಿಳಿದಿದ್ದ ಸಾಲಪ್ಪನವರು 36 ಅಂಶಗಳ ವರದಿಯನ್ನು ಸರ್ಕಾರಕ್ಕೆ ನೀಡಿದರು. ಐ.ಪಿ.ಡಿ.ಸಾಲಪ್ಪ ವರದಿಯ ಅಧಾರದ ಮೇಲೆ ಪೌರಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತಿದ್ದು, ಸಾಲಪ್ಪ ರವರು ನಮ್ಮ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಮನೆ-ಮನೆಯಿಂದ ಸಂಗ್ರಹಿಸುವ ಕಸದ ಪದ್ದತಿ ಸರಿಯಾಗಿ ಜಾರಿಯಾಗಬೇಕಿದೆ. ನಾಗರೀಕರು ರಸ್ತೆ ಬದಿ ಕಸ ಬಿಸಾಡುತ್ತಾರೆ, ಅದನ್ನು ಪೌರಕಾರ್ಮಿಕರೇ ಸ್ವಚ್ಛಗೊಳಿಸಬೇಕಿದೆ. ಮನೆ-ಮನೆಯಿಂದ ಕಸ ಸಂಗ್ರಹಿಸುವ ಪದ್ದತಿ ಸರಿಯಾಗಿ ಜಾರಿಯಾದರೆ ಬಹುತೇಖ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು.

ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ ಕೂಡಾ ಪೌರಕಾರ್ಮಿಕರು ಇನ್ನು ಪೊರಕೆಯಿಂದಲೇ ಬೀದಿಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಅದನ್ನು ನಾವು ಬದಲಿಸಲು ಮುಂದಾಗಲಾಗುತ್ತಿದೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಶೀಘ್ರ ಯಾಂತ್ರಿಕೃತ ಯಂತ್ರಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಈ ವೇಳೆ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಉಪ ಆಯುಕ್ತರಾದ ಮಂಜುನಾಥ ಸ್ವಾಮಿ, ಜಂಟಿ ಆಯುಕ್ತರಾದ ಪ್ರತಿಭಾ, ಲಕ್ಷ್ಮಿದೇವಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

09/01/2025 06:31 pm

Cinque Terre

174

Cinque Terre

0

ಸಂಬಂಧಿತ ಸುದ್ದಿ