ಬೆಂಗಳೂರು : ರಾಜ್ಯದಲ್ಲಿ ನಕ್ಸಲ್ ಚಳವಳಿ ನಿರ್ಮೂಲನೆ ದಾರಿಯಲ್ಲಿದ್ದು ಶರಣಾಗತಿ ನೀತಿ ಒಪ್ಪಿ ಆರು ಮಂದಿ ನಕ್ಸಲಿಯರು ಶರಣಾಗಿದ್ದಾರೆ. ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ನಿರಂತರ ಕಾರ್ಯಾಚರಣೆ ಹಾಗೂ ಸರ್ಕಾರ ನೀಡಿದ ಭರವಸೆ ಮುಖ್ಯವಾಹಿನಿಗೆ ನಕ್ಸಲಿಯರು ಬರುವಂತಾಗಿದೆ. ಈ ಮೂಲಕ ಎರಡು ದಶಕಗಳ ನಕ್ಸಲ್ ಚಳವಳಿಗೆ ಮುಕ್ತಿಯಾಡಿದಂತಾಗಿದೆ.
ಈ ಬೆನ್ನಲೇ ನಕಲ್ಸ್ ನಾಯಕರಾಗಿದ್ದ ವಿಕ್ರಂಗೌಡ ಎನ್ ಕೌಂಟರ್ ಆಗುವ ಮುನ್ನ ಹಲವು ಬಾರಿ ಶರಣಾಗತಿಯಾಗುವಂತೆ ಎಎನ್ಎಫ್ ಮಾಹಿತಿ ರವಾನಿಸಿದರೂ ಇದಕ್ಕೆ ಒಪ್ಪಿರಲಿಲ್ಲ. ಇದಕ್ಕೆ ಪೂರಕವೆಂಬಂತೆ ಯಾವುದೇ ಕಾರಣಕ್ಕೂ ಶರಣಾಗತಿಯಾಗುವುದಿಲ್ಲ ಎಂದು ವಿಕ್ರಂಗೌಡ ಮಾತನಾಡಿದ್ದಾನೆ ಎನ್ನಲಾದ ಸ್ಫೋಟಕ ಆಡಿಯೊ ವೈರಲ್ ಆಗಿದೆ.
ನಕ್ಸಲೀಯರು ಶಸ್ತ್ರಾಸ್ತ್ರ ತ್ಯಜಿಸಿ ನಾಗರೀಕ ಸಮಾಜದ ಮುಖ್ಯವಾಹಿನಿಗೆ ಬರಲು ಒಪ್ಪದಿದ್ದರಿಂದ ಕೂಂಬಿಂಗ್ ಕಾರ್ಯಾಚರಣೆ ಬಿಗಿಗೊಳಿಸಿದ್ದ ಎಎನ್ಎಫ್ ಪಡೆ ಖಚಿತ ಮಾಹಿತಿ ಮೇರೆಗೆ ಕಳೆದ ವರ್ಷ ನ.19ರಂದು ಉಡುಪಿಯ ಹೆಬ್ರಿ ತಾಲೂಕಿನ ಪೀತಬೈಲು ಅರಣ್ಯ ಪ್ರದೇಶದಲ್ಲಿ ಎನ್ಎನ್ಎಫ್ ಗುಂಡಿನ ಕಾಳಗಕ್ಕೆ ನಕ್ಸಲ್ ನಾಯಕನಾಗಿದ್ದ ವಿಕ್ರಂಗೌಡ ಬಲಿಯಾಗಿದ್ದ. ಎನ್ ಕೌಂಟರ್ ಖಂಡಿಸಿ ಮಾಜಿ ನಕ್ಸಲೀಯರು ಹಾಗೂ ಪ್ರಗತಿಪರ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ಮೋಸ್ಟ್ ವಾಂಟೆಂಡ್ ನಕ್ಸಲ್ ನಾಯಕನಾಗಿದ್ದ ವಿಕ್ರಂಗೌಡ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ಬಂಧನಕ್ಕೆ ಹಲವು ವರ್ಷಗಳ ಕಾಲ ಎಎನ್ಎಫ್ ಪಡೆ ಕೂಂಬಿಂಗ್ ನಡೆಸಿದರೂ ಸಿಕ್ಕಿಬಿದ್ದಿರಲಿಲ್ಲ. ಕಳೆದ ನವೆಂಬರ್ ನಲ್ಲಿ ಉಡುಪಿ ಹಾಗೂ ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ನಕ್ಸಲ್ ತಂಡದೊಂದಿಗೆ ವಿಕ್ರಂಗೌಡ ಇರುವುದನ್ನ ಪತ್ತೆಹಚ್ಚಲಾಗಿತ್ತು.
ಶಸ್ತ್ರಾಸ್ತ್ರ ತ್ಯಜಿಸಿ ನಾಗರಿಕ ಸಮಾಜಕ್ಕೆ ಬರುವಂತೆ ವಿವಿಧ ಸಂಘಟನೆಗಳಿಂದ ಮಾತುಕತೆ ನಡೆಸಿದರೂ ಫಲ ಸಿಕ್ಕಿರಲಿಲ್ಲ. ಬಂಧಿಸಲು ಹೋದ ಎಎನ್ಎಫ್ ಪಡೆ ಮೇಲೆ ವಿಕ್ರಂಗೌಡ ಗುಂಡಿನ ದಾಳಿ ನಡೆಸಿದ್ದ. ಇದಕ್ಕೆ ಪ್ರತಿರೋಧವೆಂಬಂತೆ ಆತನ ಮೇಲೆ ಎಎನ್ ಎಫ್ ಗುಂಡುಹರಿಸಿದ ಪರಿಣಾಮ ಸ್ಥಳದಲ್ಲೇ ವಿಕ್ರಂ ಮೃತನಾಗಿದ್ದ.
ಸದ್ಯ ಎನ್ ಕೌಂಟರ್ ಆಗುವ ಒಂದು ತಿಂಗಳ ಮುನ್ನ ವ್ಯಕ್ತಿಯೊಬ್ಬರ ಜೊತೆ ರಾಜಿ ಸಂಧಾನಕ್ಕೆ ಒಪ್ಪದಿರುವ ಕುರಿತಂತೆ ಕರೆಯೊಂದರಲ್ಲಿ ಮಾತನಾಡಿರುವುದು ಬಹಿರಂಗವಾಗಿದೆ.
ಅನಾಮಿಕ ವ್ಯಕ್ತಿಯೊಂದಿಗೆ ಕರೆಯಲ್ಲಿ ಮಾತನಾಡಿರುವ ವಿಕ್ರಂಗೌಡ '' ನಾವು ಯಾವುದೇ ರಾಜಿ ಮಾಡುವುದಿಲ್ಲ, ರಾಜಿಗೂ ಹೋಗುವುದಿಲ್ಲ. ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ರಾಜಿಗೆ ಹೋಗ್ತೀವಿ ಎಂದರೆ ಅರ್ಥವೇನು ? ಶರಣಾಗುವಂತೆ ಸರ್ಕಾರ ಹೇಳುತ್ತಿದೆ. ಒಂದು ವೇಳೆ ರಾಜಿಯಾದರೆ ನಮ್ಮ ಹೋರಾಟ ನಂಬಿದವರಿಗೆ ದ್ರೋಹ ಮಾಡಿದಂತಾಗುತ್ತದೆ.
ಸಿಪಿಎಂ ನಾಯಕರೆಲ್ಲಾ ರಾಜಿ ಮಾಡಿಕೊಂಡು ಹೊರಗೆ ಹೋಗಿ ಪಶ್ವಾತಾಪ ಪಡುತ್ತಿದ್ದಾರೆ. ಮಗುವಿಗೆ ಜನ್ಮ ಕೊಡುವಾಗ ತಾಯಿಗೆ ಕಷ್ಟವಾಗಲಿದೆಯೋ ಹಾಗೇ ನಮಗೂ ಕಷ್ಟವಾಗಲಿದೆ. ವ್ಯವಸ್ಥೆ ತಲೆಕೆಳಗಾಗಿದ್ದು, ಬದಲಾಯಿಸಬೇಕಿದೆ. ಈಗಾಗಲೇ ನಮ್ಮಜೊತೆ ಇರುವವರನ್ನ ಕಳೆದುಕೊಂಡಿದ್ದೇವೆ. ಒಂದನ್ನ ಪಡೆಯಬೇಕಾದರೆ ಇನ್ನೊಂದನ್ನ ಕಳೆದುಕೊಳ್ಳಬೇಕಾಗುತ್ತದೆ ' ಎಂದು ಕರೆಯಲ್ಲಿ ಮಾತನಾಡಿದ್ದಾನೆ ಎನ್ನಲಾಗಿದೆ.
PublicNext
09/01/2025 05:57 pm