ಸಿದ್ದಾಪುರ ಪಟ್ಟಣ ವ್ಯಾಪ್ತಿಯ ಶಂಕರ ಮಠದ ಡಿ ಎನ್ ಶೇಟ್ ವೇದಿಕೆಯಲ್ಲಿ 7ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಕನ್ನಡ ನುಡಿ ಜಾತ್ರೆಯನ್ನ ಸರ್ಕಾರದ ಅನುದಾನವನ್ನ ನಿರೀಕ್ಷಿಸದೆ ಕನ್ನಡಪರ ಪ್ರೀತಿಯುಳ್ಳ ಜನರ ಹಣದಿಂದ ಮಾಡಿದರೆ ಚಂದ, ಹಳೆಯ ಒಳ್ಳೆಯದನ್ನು ಉಳಿಸಿಕೊಂಡು ಹೊಸತನದಿ ಬೆಳೆಸಿದರೆ ಅಭಿವೃದ್ಧಿಯಾಗುತ್ತದೆ ಎಂದು ಹಿರಿಯ ಬರಹಗಾರ ರವೀಂದ್ರ ಭಟ್ ಐನ್ ಕೈಕಾರ್ಯಕ್ರಮ ಉದ್ಘಾಟಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸ ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡಿದ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ಇಂತಹ ಸಾಹಿತ್ಯ ಸಮ್ಮೇಳನಗಳು ಯುವ ಬರಹಗಾರರಿಗೆ ವೇದಿಕೆಯಾಗಿದೆ, ಇದು ಅಧಿಕಾರಿಗಳ ಸಮ್ಮೇಳನವಾಗದೆ ಕನ್ನಡ ಮನಸುಗಳ ಗೆಲ್ಲುವ ಸಮ್ಮೇಳನವಾಗಬೇಕು ಶಿಕ್ಷಣ ಯಾವುದೇ ಭಾಷೆಯಲ್ಲಿದ್ದರೂ ನಮ್ಮ ಭಾಷೆ ನಾಡು ನುಡಿ ಮರೆಯಬಾರದು, ಮಕ್ಕಳನ್ನ ಬದಲಿಸುವ ಕೃತಿಗಳು ಬರಬೇಕು, ಆ ಪುಸ್ತಕಗಳು ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸಬೇಕು. ಸಮಾಜದ ಪ್ರಗತಿ ಜನಜೀವನ ಶೈಲಿ ಬದಲಿಸುವಂತಹ ಪುಸ್ತಕಗಳನ್ನ ಓದುವಂತಾಗಬೇಕು, ಮಕ್ಕಳು ಮೊಬೈಲ್ ನಿಂದ ದೂರವಿದ್ದಾಗ ಮಕ್ಕಳ ಏಳಿಗೆ ಜೊತೆಗೆ ದೇಶದ ಅಭಿವೃದ್ಧಿ ಆಗುತ್ತದೆ ಎಂದರು.
ಜಿ.ಜಿ ಹೆಗಡೆ ಬಾಳ್ ಗೋಡ ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ ಎಲ್ ವಾಸರೆ ಆಶಯ ನುಡಿಗಳನ್ನಾಡಿ ಎರಡು ವರ್ಷದಿಂದ ಸರ್ಕಾರದ ಅನುದಾರ ಬರುತ್ತಿಲ್ಲ ಆದರೂ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಷಯ, ಜನಪ್ರತಿನಿಧಿಗಳಿಗೆ ಸಾಹಿತ್ಯ ನಮ್ಮ ನಾಡು ನುಡಿ ಸಂಸ್ಕೃತಿ ಬಗ್ಗೆ ಅಭಿರುಚಿ ಇದ್ದಾಗ ಸಮ್ಮೇಳನಗಳು ಯಶಸ್ವಿಯಾಗುತ್ತವೆ ಎಂದರು.
ವೇದಿಕೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಕೆ ಜಿ ನಾಗರಾಜ, ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ , ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷ ಆರ್ ಕೆ ಹೊನ್ನೆಗುಂಡಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಪ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯೇಂದ್ರ ಗೌಡರ್, ಟಿಎಂಎಸ್ ಅಧ್ಯಕ್ಷ ಆರ್ ಎಂ ಹೆಗಡೆ ಬಾಳೆಸರ , ಸಾಮಾಜಿಕ ಧುರಿಣ ವಸಂತ್ ನಾಯ್ಕ್, ಶಿಕ್ಷಣ ಪ್ರಸಾರಕ ಸಮಿತಿ ಕಾರ್ಯ ಅಧ್ಯಕ್ಷ ಶಶಿಭೂಷಣ್ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ್, ನಿವೃತ್ತ ನೌಕರ ಸಂಘದ ಅಧ್ಯಕ್ಷ ಸಿಎಸ್ ಗೌಡರ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಹೆಗಡೆ, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಟಿ ಕೆ ನಾಯ್ಕ್, ಸಾಹಿತಿಗಳಾದ ಸುಬ್ರಾಯ ಭಟ್, ಕೆ. ಎ. ಭಟ್ ತಾಲೂಕ ಕಸಾಪ ನಿಕಟಪೂರ್ವ ಅಧ್ಯಕ್ಷ ನಾಗರಾಜ ಮಾಳ್ಕೋಡ್ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ತಹಶೀಲ್ದಾರ್ ಎಂಆರ್ ಕುಲಕರ್ಣಿ ಧ್ವಜಾರೋಹಣ ಮಾಡುವ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ತಾಲೂಕ್ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ದೇವರಾಜ್ ಎಂ ಹಿತ್ಲಕೊಪ್ಪ ಸಾಂಸ್ಕೃತಿಕ ಮೆರವಣಿಗೆಗೆ ಹೊಸೂರಿನ ಕುಮಟಾ ಸರ್ಕಲ್ ನಲ್ಲಿ ಚಾಲನೆ ನೀಡಿದರು. ಮೆರವಣಿಗೆಯು ಬಂಕೇಶ್ವರ ಸರ್ಕಲ್ ನಿಂದ ಹೊಸೂರು ಸಾಗರ್ ಸರ್ಕಲ್ ವರೆಗೆ ಸಾಗಿ ಉದ್ಘಾಟನಾ ಸಭೆ ನಡೆಯುವ ಶಂಕರ ಮಠಕ್ಕೆ ತಲುಪಿತು. ಕಲ್ಲೂರು ಶಾಲೆಯ ವಿದ್ಯಾರ್ಥಿಗಳ ಡೊಳ್ಳು ಕುಣಿತ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಮೆರಗು ಹೆಚ್ಚಿಸಿತ್ತು.
ಸಮ್ಮೇಳನದಲ್ಲಿ ಸ್ವಾತಂತ್ರ್ಯ ಹೋರಾಟಗಾರಾದ ಬಂಗಾರಪ್ಪ ನಾಯ್ಕ ಮನಮನೆ, ಮಾಧವ ಫೈ ಬಿಳಗಿ, ವಿಶ್ವನಾಥ ಶೇಟ್ ಹಾರ್ಸಿಕಟ್ಟ, ಭಾಗವತರಾದ ರಾಮಚಂದ್ರ ನಾಯ್ಕ ಹೆಮ್ಮನಬೈಲ ರವರ ಪ್ರಾತ: ಸ್ಮರಣೀಯ ದ್ವಾರಗಳನ್ನು ಸ್ವಾಗತ ಸಮಿತಿ ಅಧ್ಯಕ್ಷರ ಕೆಜಿ ನಾಗರಾಜ್ ಉದ್ಘಾಟಿಸಿದರು.
Kshetra Samachara
08/01/2025 04:41 pm