ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಹವಾಮಾನ ಇಲಾಖೆ ಕೇಂದ್ರದಲ್ಲಿ ಎಕ್ಸ್ ಬ್ಯಾಂಡ್ ಡಾಪ್ಲರ್ ರಾಡಾರ್ ಸ್ಥಾಪನೆಗೆ ಮನವಿ ಮಾಡಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಯತ್ನಕ್ಕೆ ಇದೀಗ ಜಯ ಸಿಕ್ಕಿದೆ.
ಕೃಷಿ ವಿವಿಯ ಹವಾಮಾನ ಇಲಾಖೆಯಲ್ಲಿ ಎಕ್ಸ್ ಬ್ಯಾಂಡ್ ಡಾಪ್ಲರ್ ರಾಡಾರ್ ಸ್ಥಾಪನೆ ಮಾಡಬೇಕು. ಅದು ತುರ್ತು ಅಗತ್ಯವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೇಂದ್ರದ ತಂತ್ರಜ್ಞಾನ ಮತ್ತು ಭೂ ವಿಜ್ಞಾನಗಳ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದಿದ್ದರು.
ಜೋಶಿ ಅವರ ವಿನಂತಿ ಮೇರೆಗೆ ಇದೀಗ ಕೃಷಿ ವಿವಿ ಹವಾಮಾನ ಇಲಾಖೆಯಲ್ಲಿ ಎಕ್ಸ್ ಬ್ಯಾಂಡ್ ಡಾಪ್ಲರ್ ರಾಡಾರ್ ಸ್ಥಾಪಿಸಲು ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರವೇ ಇದು ಕಾರ್ಯಾರಂಭ ಮಾಡಲಿದೆ. ಈ ರಾಡಾರ್ ಸ್ಥಾಪನೆಯಿಂದ 150 ರಿಂದ 175 ಕಿಲೋ ಮೀಟರ್‌ವರೆಗೂ ಹವಾಮಾನ ಬದಲಾವಣೆ ಮತ್ತು ಹವಾಮಾನ ವೈಪರಿತ್ಯದ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಮಳೆಯ ಮುನ್ಸೂಚನೆ, ಒಣಹವೆಯ ಮಾಹಿತಿ, ತಾಪಮಾನದ ಏರುಪೇರುಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಇದರಿಂದ ರೈತರನ್ನು ಬೆಳೆಹಾನಿ ಮತ್ತು ಬೆಳೆ ನಷ್ಟದಿಂದ ಪಾರು ಮಾಡಬಹುದಾಗಿದೆ.
ಈ ತಂತ್ರಜ್ಞಾನ ಅಳವಡಿಕೆಯಿಂದಾಗಿ ಧಾರವಾಡ ಪ್ರದೇಶದಲ್ಲಿ ನುರಿತ ಯುವ ವೃತ್ತಿಪರರಿಗೆ ಉದ್ಯೋಗ ಅವಕಾಶಗಳೂ ಲಭ್ಯವಾಗಲಿವೆ. ಈ ವಿಷಯವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಪೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Kshetra Samachara
07/01/2025 08:51 pm