ಧಾರವಾಡ: ಈ ಸರ್ಕಾರದ ಅವಧಿಯಲ್ಲಿ ಬಾಕಿ ಬಿಲ್ ಪಾವತಿಯೇ ಆಗುತ್ತಿಲ್ಲ ಎಂದು ಗುತ್ತಿಗೆದಾರರು ಒಂದೆಡೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕಳೆದ 30 ವರ್ಷಗಳಿಂದ ಗುತ್ತಿಗೆದಾರರೊಬ್ಬರ ಬಿಲ್ ಪಾವತಿಯನ್ನೇ ಮಾಡದ ಅಧಿಕಾರಿಗೆ ಇದೀಗ ಬಿಸಿ ಮುಟ್ಟಿದೆ. ಅಲ್ಲದೇ ಈಗ ಬಾಕಿ ಬಿಲ್ ಪಾವತಿ ಮಾಡುತ್ತೇನೆ ಎನ್ನುವ ಮೂಲಕ ಅಧಿಕಾರಿ ಸಂಕಷ್ಟದಿಂದ ಪಾರಾಗುವ ದಾರಿ ಹುಡುಕಿಕೊಳ್ಳುತ್ತಿದ್ದಾನೆ. ಇಷ್ಟಕ್ಕೂ ಯಾವುದು ಆ ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಡೀಟೆಲ್ಸ್.
ಈ ದೃಶ್ಯಗಳಲ್ಲಿ ಹೀಗೆ ಖುರ್ಚಿ ಮೇಲೆ ಕುಳಿತಿರುವ ಸಣ್ಣ ನೀರಾವರಿ ಇಲಾಖೆಯ ಧಾರವಾಡ ವಿಭಾಗದ ಅಧಿಕಾರಿಯ ಹೆಸರು ದೇವರಾಜ ಶಿಗ್ಗಾಂವಿ. ಸಣ್ಣ ನೀರಾವರಿ ಇಲಾಖೆಯಲ್ಲಿ ಕಾರ್ಯ ನಿರ್ವಾಹಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 30 ವರ್ಷಗಳ ಹಿಂದೆ ಹುಬ್ಬಳ್ಳಿಯ ಗುತ್ತಿಗೆದಾರರಾದ ಆರ್.ಎನ್.ನಾಯಕ ಅವರು ಗದಗದಲ್ಲಿ ಕೆಲಸವೊಂದನ್ನು ಮಾಡಿದ್ದರು. ಅದಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ಹಣ ಬರಬೇಕಿತ್ತು. ಅರ್ಧ ಹಣ ಕೊಟ್ಟಿದ್ದ ಅಧಿಕಾರಿ, ಇನ್ನುಳಿದ ಸುಮಾರು 15-16 ಲಕ್ಷ ರೂಪಾಯಿಯನ್ನು ಬಾಕಿ ಇರಿಸಿಕೊಂಡಿದ್ದರು. ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಗುತ್ತಿಗೆದಾರರು ವಿನಂತಿಸಿಕೊಂಡಿದ್ದರೂ ಬಿಲ್ ಮಾತ್ರ ಬಿಡುಗಡೆಯಾಗಿರಲಿಲ್ಲ. ಇದರಿಂದ ರೋಸಿ ಹೋದ ಗುತ್ತಿಗೆದಾರ ನಾಯಕ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಸದ್ಯ ಈ ಪ್ರಕರಣದ ವಿಚಾರಣೆಯನ್ನು ಧಾರವಾಡ ನ್ಯಾಯಾಲಯ ನಡೆಸಿದೆ. 30 ವರ್ಷಗಳಿಂದ ಬಾಕಿ ಇರಿಸಿಕೊಂಡಿದ್ದ ರೂಪಾಯಿ ಮೌಲ್ಯ ಈಗ ಹೆಚ್ಚಾಗಿದೆ. ಸದ್ಯದ ಪ್ರಕಾರ ಅದರ ಬಡ್ಡಿ ಸೇರಿ ಸುಮಾರು 3 ಕೋಟಿ 34 ಲಕ್ಷ ರೂಪಾಯಿಯಷ್ಟಾಗಿದ್ದು, ಅದನ್ನು ಪಾವತಿ ಮಾಡುವಂತೆ ಗುತ್ತಿಗೆದಾರರು ಕೇಳಿದ್ದರು. ಆದರೆ, ಅದಕ್ಕೆ ಒಪ್ಪದ ಅಧಿಕಾರಿ ಶಿಗ್ಗಾಂವಿ ಕೇವಲ 1 ಕೋಟಿ ಮಾತ್ರ ಪಾವತಿ ಮಾಡುತ್ತೇನೆಂದು ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದರು. ಬಾಕಿ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಇದೀಗ ನ್ಯಾಯಾಲಯವು ಸಣ್ಣ ನೀರಾವರಿ ಇಲಾಖೆಯ ಧಾರವಾಡ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ದೇವರಾಜ ಶಿಗ್ಗಾಂವಿ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಗುತ್ತಿಗೆದಾರ ನಾಯಕ ಅವರು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅಧಿಕಾರಿಗೆ ಸದ್ಯಕ್ಕೆ ಬಿಸಿ ಮುಟ್ಟಿದಂತಾಗಿದೆ. ಅಲ್ಲದೇ ಕೇವಲ 1 ಕೋಟಿ ಬಿಲ್ ಪಾವತಿಸುವುದಾಗಿ ಹೇಳುತ್ತಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಆದರೆ, ಗುತ್ತಿಗೆದಾರರು ಬಾಕಿ ಎಲ್ಲ ಮೊತ್ತವನ್ನು ಪಾವತಿಸುವಂತೆ ಹೇಳುತ್ತಿದ್ದು, ನ್ಯಾಯಾಲಯವು ಸದ್ಯಕ್ಕಂತೂ ಅಧಿಕಾರಿ ಶಿಗ್ಗಾಂವಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 30 ವರ್ಷಗಳ ಬಾಕಿ ಬಿಲ್ ನ್ಯಾಯಾಲಯದ ಮೆಟ್ಟಿಲೇರಿ ಸುದ್ದಿಯಾಗಿದ್ದು ರಾಜ್ಯದಲ್ಲಿ ಇದೇ ಮೊದಲಾಗಿದೆ.
ಸ್ಲಗ್: ನ್ಯಾಯಾಲಯದ ಮೆಟ್ಟಿಲೇರಿದ ಗುತ್ತಿಗೆದಾರ: ಅಧಿಕಾರಿಗೆ ಸಂಕಷ್ಟ
Kshetra Samachara
08/01/2025 05:41 pm