ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ವಿಜೃಂಭಣೆಯ ಶ್ರೀಗುರು ಮಡಿವಾಳೇಶ್ವರರ ರಥೋತ್ಸವ 

ಬೈಲಹೊಂಗಲ- ಪಟ್ಟಣದ ಪ್ರಸಿದ್ದ ಶ್ರೀ ಗುರು ಮಡಿವಾಳೇಶ್ವರ ಮಠದ 43ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ನೂತನ ಶಿಲಾಮಠದ ಲೋಕಾರ್ಪಣೆ ಸಮಾರಂಭ ನಿಮಿತ್ತ ಸೋಮವಾರ ಸಂಜೆ ಸಾವಿರಾರು ಭಕ್ತರ ಹರ್ಷೋದ್ಘಾರ ಮಧ್ಯೆ ಶ್ರೀ ಗುರು ಮಡಿವಾಳೇಶ್ವರ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. 

ದೇವಸ್ಥಾನ ಆವರಣದಿಂದ ಸಕಲ ವಾದ್ಯಮೇಳದೊಂದಿಗೆ ಆರಂಭವಾದ ಗುರು ಮಡಿವಾಳೇಶ್ವರ ಪಾಲಕಿ ಉತ್ಸವ, ಶರಣೆ ತಂಗೆಮ್ಮ ತಾಯಿ ಭಾವಚಿತ್ರ ಮೆರವಣಿಗೆ ನೋಡುಗರ ಗಮನ ಸೆಳೆಯಿತು. ಮೆರವಣಿಗೆ ಬಸವೇಶ್ವರ ವೃತ್ತ, ಮೂಗಿ ಗಲ್ಲಿ, ಬಜಾರ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಕಲ್ಲಗುಡಿ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು. ವಾಡಿಕೆಯಂತೆ ಪಾಲಕಿಯೊಂದಿಗೆ ಪ್ರಾಚೀನ ದೇವಸ್ಥಾನವಾಗಿರುವ ಕಲ್ಲಗುಡಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.

ನಂತರ ಜವಳಿ ಕೂಟದಲ್ಲಿರುವ ರಥದ ಸ್ಥಳಕ್ಕೆ ಬಂದು ರಥಕ್ಕೆ ಮಾಲೆ ಅರ್ಪಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಹರಹರ ಮಹಾದೇವ, ಗುರು ಮಡಿವಾಳೇಶ್ವರ ಮಹಾರಾಜಕೀ ಜಯ ಎಂದು ಘೋಷಣೆ ಮೊಳಗಿಸಿದರು. ಮಡಿವಾಳೇಶ್ವರ ಮಠದ ಪೀಠಾಧಿಪತಿ ಮಡಿವಾಳೇಶ್ವರ ಸ್ವಾಮೀಜಿ, ಬಳುಟಗಿ ಶಿವಕುಮಾರ ಸ್ವಾಮೀಜಿ, ಬಳ್ಳಾರಿಯ ಗೋವರ್ಧನಾನಂದ ಪುರಿ ಸ್ವಾಮೀಜಿ, ಶಿವನಾಪೂರದ ಪ್ರಣವಾನಂದ ಪುರಿ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿದರು.

ರಥದಲ್ಲಿ ಮಡಿವಾಳೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ರಥವನ್ನು ರುದ್ರಾಕ್ಷೀ, ವಿವಿದ ಹೂವಿನ ಮಾಲೆಗಳಿಂದ, ಕೆಂಪು, ಬಿಳಿ ದ್ವಜಗಳಿಂದ ಅಲಂಕರಿಸಲಾಗಿತ್ತು. ಬಂಗಾರ ಬಣ್ಣದ ಕಲಶ, ಬೆಳ್ಳಿ ನವಿಲು, ದೇವಿ, ಮಡಿವಾಳೇಶ್ವರ ಭಾವಚಿತ್ರಗಳು ರಥದ ಅಂದವನ್ನು ಹೆಚ್ಚಿಸಿದ್ದವು.

ಶ್ರದ್ದೆ, ಭಕ್ತಿಯಿಂದ ರಥೋತ್ಸವ ಎಳೆದು ಪುನೀತರಾದರು. ರಥಕ್ಕೆ ಹೂವು, ಹಣ್ಣು, ಕಾರಿಕು ಸಮರ್ಪಿಸಿ ಕೈ ಮುಗಿದರು. ವಿವಿಧ ಹೂವು, ಮಾಲೆಗಳಿಂದ ಕಂಗೊಳಿಸಿದ ರಥೋತ್ಸವ ಪ್ರಮುಖ ಬಜಾರ ರಸ್ತೆಯ ಜವಳಿ ಕೂಟದಿಂದ ಮೇದಾರ ಗಲ್ಲಿ ಮಾರ್ಗವಾಗಿ ಮಠಕ್ಕೆ ಬಂದು ತಲುಪಿತು. ನಂದಿಕೋಲ ನರ್ತನ, ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಮೇಳಗಳು ರಥೋತ್ಸವದ ಕಳೆ ಹೆಚ್ಚಿಸಿದವು. ಸುಮಂಗಲೆಯರು ಪೂರ್ಣಕುಂಭ ಹೊತ್ತು ಸಾಗಿದರು. 

ಸಣ್ಣಬಸಪ್ಪ ಕುಡಸೋಮಣ್ಣವರ, ಈಶ್ವರ ಕೊಪ್ಪದ, ಬಸವರಾಜ ಕಲಾದಗಿ, ಕಾಶೀನಾಥ ಬಿರಾದಾರ, ಈರಪ್ಪ ಹಣಸಿ, ಜಗದೀಶ ಕೊತ್ತಂಬ್ರಿ, ಬಿ.ವಾಯ್. ತಳವಾರ, ಶಿವು ಹತ್ತರಕಿ, ಫಕೀರ ಮಡ್ಡೇನ್ನವರ, ಅಜ್ಜಪ್ಪ ಬೆಳಗಾವಿ, ರುದ್ರಪ್ಪ ತುರಮರಿ, ರಾಮಕೃಷ್ಣ ಬಡಿಗೇರ, ಶಿವಲಿಂಗ ಕೊತ್ತಂಬ್ರಿ, ಶಿವಲಿಂಗಯ್ಯ ಏಣಗಿಮಠ, ಪುಂಡಲೀಕ ಕಡಕೋಳ, ಶಿವಾನಂದ ಬೆಳಗಾವಿ, ರವಿ ಲಕ್ಕನ್ನವರ, ಮಹಾಂತೇಶ ಅಕ್ಕಿ, ಗಿರೀಶ ಪಾಟೀಲ, ಶ್ರೀಶೈಲ ತೋಟಗಿ ಜಾತ್ರಾ ಕಮೀಟಿ ಮುಖಂಡರು, ಹಿರಿಯರು, ಯುವಕರು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. 

Edited By : PublicNext Desk
Kshetra Samachara

Kshetra Samachara

06/01/2025 08:56 pm

Cinque Terre

4.84 K

Cinque Terre

0

ಸಂಬಂಧಿತ ಸುದ್ದಿ