ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ರೈಲು ಹಳಿ ನಿರ್ಮಾಣಕ್ಕೆ ಭೂಮಿ ಬಿಟ್ಟು ಕೊಡಲು ಒಪ್ಪದ ರೈತರು

ಧಾರವಾಡ : ಧಾರವಾಡ-ಬೆಳಗಾವಿ ಮಧ್ಯೆ ನೇರ ರೈಲು ಮಾರ್ಗ ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಯೋಜನೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ರೈಲು ಹಳಿಯೂ ಆಗಿ, ರೈಲು ಓಡಾಡಬೇಕಿತ್ತು. ಆದರೆ ಈ ಯೋಜನೆಗೆ ಮುಹೂರ್ತವೆ ಸರಿ ಇಲ್ಲ ಎನಿಸುತ್ತಿದೆ. ಒಂದಿಲ್ಲ ಒಂದು ಕಾರಣಕ್ಕೆ ವಿಳಂಬ ಆಗುತ್ತಲೇ ಬರ್ತಾ ಇದ್ದು, ಈಗ ಧಾರವಾಡ ತಾಲೂಕಿನ 8 ಗ್ರಾಮಗಳ ರೈತರು ಈ ಯೋಜನೆಗೆ ತಮ್ಮ ಭೂಮಿ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.‌ ಅಷ್ಟಕ್ಕೂ ರೈತರ ವಾದ ಏನು? ಯಾಕೆ ಭೂಮಿ ಕೊಡೋದಕ್ಕೆ ಮುಂದೆ ಬರುತ್ತಿಲ್ಲ ಎಂಬುದರ ಡೀಟೆಲ್ಸ್ ಇಲ್ಲಿದೆ ನೋಡಿ.

ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗ ಯೋಜನೆ ಸಂಬಂಧ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮುತುವರ್ಜಿ ವಹಿಸಿದ್ದಾರೆ. ಆದಷ್ಟು ಬೇಗ ಭೂಸ್ವಾಧೀನ ಮಾಡಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಹೇಳಿದ್ದಾರೆ. ಹೀಗಾಗಿ ಕೆಐಎಡಿಬಿ ಭೂಸ್ವಾಧೀನಕ್ಕೆ ಮುಂದಾಗಿದ್ದು, ರೈತರಿಗೆ ಈ ಇಲಾಖೆ ನಿಗದಿ ಮಾಡಿರುವ ಬೆಲೆ ಒಪ್ಪಿಕೊಳ್ಳೋದಕ್ಕೆ ಆಗುತ್ತಿಲ್ಲ. ಈಗ ಸರ್ವೆ ಮಾಡಿ ಗುರುತಿಸಿರುವುದಲ್ಲೆವೂ ಫಲವತ್ತಾದ ಬೆಲೆ ಬಾಳುವ ಜಮೀನು.‌ ಮೇಲಾಗಿ ಪ್ರಮುಖ ರಸ್ತೆಗೆ ಹೊಂದಿಕೊಂಡೇ ಇವೆ. ಹೀಗಾಗಿ ಕೆಐಎಡಿಬಿ ನಿಗದಿ ಮಾಡಿರುವ ಪ್ರತಿ ಎಕರೆಗೆ 45 ಲಕ್ಷ ರೂಪಾಯಿಯನ್ನು ರೈತರು ಒಪ್ಪಿಲ್ಲ. ಬದಲಿಗೆ ಪ್ರತಿ ಎಕರೆಗೆ ಎರಡೂವರೆ ಕೋಟಿ ರೂಪಾಯಿಯನ್ನು ರೈತರು ಕೇಳುತ್ತಿದ್ದಾರೆ. ಇಷ್ಟು ಬೆಲೆ ಕೊಟ್ಟರೆ ಜಮೀನು ಕೊಡುತ್ತೇವೆ. ಇಲ್ಲವೇ ನಮ್ಮ ಜಮೀನು ನಮಗೇ ಬಿಟ್ಟು ಬಿಡಿ ಎನ್ನುತ್ತಿದ್ದಾರೆ.

ಧಾರವಾಡ-ಬೆಳಗಾವಿ ಮಧ್ಯೆ ಒಟ್ಟು 73 ಕಿ.ಮೀ ನೂತನ ರೈಲು ಮಾರ್ಗವಾಗಬೇಕು. ಸದ್ಯ ಧಾರವಾಡ ತಾಲೂಕಿನ ಕ್ಯಾರಕೊಪ್ಪದಿಂದ ಮುಮ್ಮಿಗಟ್ಟಿ ಮಾರ್ಗವಾಗಿ, ಹೈಕೋರ್ಟ್ ಬಳಿ ಈ ಮಾರ್ಗ ಬಂದು ಮುಂದೆ ಬೆಳಗಾವಿಯತ್ತ ಹೋಗುತ್ತದೆ. ಇದಕ್ಕಾಗಿ ಒಟ್ಟು 927 ಕೋಟಿ 42 ಲಕ್ಷ ರೂಪಾಯಿ ಮೀಸಲಿಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 225 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಜಮೀನು ಬೇಕು. ಆದರೆ, ಹಿಂದಿನ ಸರ್ಕಾರ ಮುಮ್ಮಿಗಟ್ಟಿ ಬಳಿ ಉದ್ಯಮವೊಂದರ ಮಧ್ಯೆ ರೈಲು ಮಾರ್ಗ ಹಾದು ಹೋಗುವಂತೆ ಸರ್ವೆ ಮಾಡಿತ್ತು. ಆ ಉದ್ಯಮ ವಿರೋಧ ಮಾಡಿದ್ದಕ್ಕೆ ಈಗ ಚಿಕ್ಕಮಲ್ಲಿಗವಾಡ-ಮುಮ್ಮಿಗಟ್ಟಿ ಮೂಲಕ ಹಾದು ಹೋಗುವಂತೆ ಮಾಡಿದ್ದಾರೆ. ‌

ಇದು ರೈತರ ಜಮೀನು ಮಾತ್ರವಲ್ಲ ಊರುಗಳನ್ನೂ ತುಂಡರಿಸುವಂತಿದೆ. ರೈಲ್ವೆಗೆ ಬೇಕಿರೋದು ಗುಂಟೆಗಟ್ಟಲೇ ಜಮೀನು ಹೀಗಾಗಿ ಪೂರ್ತಿ ಜಮೀನಿನಲ್ಲಿ ರೈಲ್ವೆ ಹಾದು ಹೋದರೆ ಅರ್ಧ ಜಮೀನು ಒಂದು ಕಡೆ, ಇನ್ನರ್ಧ ಜಮೀನು ಹಳಿಯ ಆ ಕಡೆ ಆಗುತ್ತದೆ. ಇದು ರೈತರಿಗೆ ತುಂಬಾ ತೊಂದರೆ ಆಗುತ್ತದೆ ಅನ್ನೋದು ರೈತರ ವಾದ. ಹೀಗಾಗಿ ಈಗ ಮಾಡಿರುವ ರೈಲ್ವೆ ಮಾರ್ಗದ ನಕ್ಷೆ ಬದಲಿಸಬೇಕು.

ಮುಮ್ಮಿಗಟ್ಟಿ-ಚಿಕ್ಕಮಲ್ಲಿಗವಾಡ ಗ್ರಾಮಗಳ ಜಮೀನಿನ ಹಿಂಭಾಗದಲ್ಲಿ ಐಐಟಿಯನ್ನೂ ದಾಟಿ ಕ್ಯಾರಕೊಪ್ಪ ಮೂಲಕ ನೇರವಾಗಿ ಬರುವಂತೆ ಮಾಡಬೇಕು ಅನ್ನೋದು ರೈತರ ವಾದ. ಆದರೆ ಈಗ ಸರ್ವೆ ಮಾಡಿದ್ದಲ್ಲಿಯೇ ಭೂಸ್ವಾಧೀನ‌ ಮಾಡ್ತೇವಿ ಅಂತಾ ಕೆಐಎಡಿಬಿ ಅಧಿಕಾರಿಗಳು ಬೆಲೆ‌ ನಿಗದಿ ಸಭೆ ಮಾಡಿದ್ದರು. ಆದರೆ ಈ ಸಭೆಯಲ್ಲಿ ತಮ್ಮ ವಾದವನ್ನೇ ಮುಂದಿಟ್ಟ ರೈತರು ಅಧಿಕಾರಿಗಳ ಯಾವ ಮಾತನ್ನೂ ಕೇಳಿಲ್ಲ.

ಸದ್ಯ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿ ಕೊಡಬೇಕಿದ್ದು, ಆ ಭೂಮಿಯಲ್ಲಿ ಹಳಿ ನಿರ್ಮಿಸಿ ರೈಲು ಓಡಿಸುವ ಕೆಲಸ ಕೇಂದ್ರ ಸರ್ಕಾರದ್ದು, ಶೇ. 80ರಷ್ಟು ಭೂಸ್ವಾಧೀನ ಆಗೋವರೆಗೂ ಕಾಮಗಾರಿ ಆರಂಭ ಆಗೋದೇ ಇಲ್ಲ. ಆದರೆ ಈಗ ಭೂಸ್ವಾಧೀನವೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/01/2025 08:34 pm

Cinque Terre

41.06 K

Cinque Terre

4

ಸಂಬಂಧಿತ ಸುದ್ದಿ