ಬೆಂಗಳೂರು : ಸಾರಿಗೆ ನೌಕರರು ಮತ್ತು ಕುಟುಂಬದವರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯದಿಂದ ಕಾಣಬಾರದು. ಚಿಕಿತ್ಸೆ ನೀಡುವಲ್ಲಿ ಉದಾಸೀನ ಮಾಡಕೂಡದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಸ್ಪಷ್ಟ ಸೂಚನೆ ನೀಡಿದರು.
ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಸವಲತ್ತು ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಸಾರಿಗೆ ನೌಕರರು ತಮ್ಮ ದುಡಿಮೆಯ ಮೂಲಕ ಸಂಸ್ಥೆಯ ಮತ್ತು ನಿಗಮದ ಆದಾಯ ಹೆಚ್ಚಿಸುತ್ತಿದ್ದಾರೆ. ಇವರ ಆರೋಗ್ಯ ಸರ್ಕಾರದ ಮತ್ತು ಸಂಸ್ಥೆ ಹಾಗೂ ನಿಗಮದ ಜವಾಬ್ದಾರಿ ಆಗಿದೆ. ಈ ಕಾರಣಕ್ಕೇ ಖಾಸಗಿ ಆಸ್ಪತ್ರೆಗಳ ಜೊತೆಗೂ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದರು.
275 ಖಾಸಗಿ ಆಸ್ಪತ್ರೆಗಳ ಜೊತೆಗೆ ಒಡಂಬಡಿಕೆ ಆಗಿದೆ. ಈ ಪ್ರಮಾಣ ಇನ್ನೂ ಹೆಚ್ಚಲಿದೆ. ಸಿಬ್ಬಂದಿ ಕರ್ತವ್ಯನಿರತ ಊರಿನಲ್ಲೇ ಚಿಕಿತ್ಸೆ ಪಡೆಯಬಹುದು. ನೌಕರರ ಕುಟುಂಬದವರು ಅವರು ನೆಲೆಸಿರುವ ಊರಿನಲ್ಲೇ ನಗದು ರಹಿತವಾಗಿ ಚಿಕಿತ್ಸೆ ಪಡೆಯಬಹುದಾದ ಅತ್ಯಂತ ಸುಲಲಿತ ಯೋಜನೆ ಇದಾಗಿದೆ. ನಮ್ಮ ನೌಕರರು ಮತ್ತು ಕುಟುಂಬದವರು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಶಾಸಕ ಎಸ್ ಆರ್ ಶ್ರೀನಿವಾಸ್ ಮತ್ತು ಸಿಎಎಸ್ ಶಾಲಿನಿ ರಜನೀಶ್ ಉಪಸ್ಥಿತಿರಿದ್ದರು.
PublicNext
06/01/2025 05:51 pm