ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಗಾಂಧಿ ಭವನದಲ್ಲಿ ಪತ್ರಕರ್ತ ಸದಾಶಿವ ಶೆಣೈ ಅವರ ಅಭಿನಯ ಶಾರದೆ ಜಯಂತಿ ಅವರ ಜೀವನಗಾಥೆ "Lovely But lonely" ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ, ಜಯಂತಿ ಅವರು ನನ್ನನ್ನು ಸದಾ ಪ್ರೀತಿಯಿಂದ ಹೀರೋ ಅಂತ ಕರಿಯುತ್ತಿದ್ದರು ಎಂದು ಸ್ಮರಿಸಿದರು.
ಜಯಂತಿ ಅವರು ಅಪಾರ ಮನುಷ್ಯತ್ವ ಹೊಂದಿದ್ದ ಸ್ನೇಹಜೀವಿ ಆಗಿದ್ದರು. ಕಲಾವಿದೆಯಾಗಿ ಜಯಂತಿಗೆ ಜಯಂತಿಯವರೇ ಸಾಟಿ ಆಗಿದ್ದರು. ಅವರು ಮಾನವೀಯವಾಗಿ ಬದುಕನ್ನು ನಡೆಸಿ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ ಎಂದರು. ನನ್ನ ಮತ್ತು ಜಯಂತಿ ಅವರ ರಾಜಕೀಯ ಮೌಲ್ಯಗಳು ಒಂದೇ ಆಗಿದ್ದರು. ಸಮಾಜ ಪ್ರೇಮಿ, ಮಾನವೀಯತೆಯ ಪ್ರೇಮಿ ಆಗಿದ್ದರು ಎಂದು ಬಣ್ಣಿಸಿದರು.
ವಿಶ್ವದ ಯಾವುದೇ ಭಾಷೆಯ ಸಿನಿಮಾಗಳಿಗಿಂತ ಕನ್ನಡ ಭಾಷೆ ಸಿನಿಮಾಗಳು ಹಿಂದೆಲ್ಲಾ ಒಳ್ಳೆ ಗುಣಮಟ್ಟ ಕಾಯ್ದುಕೊಂಡಿವೆ. ನಾನು ಸದಾ ನಮ್ಮ ಕನ್ನಡ ಚಿತ್ರರಂಗದ ಪ್ರೋತ್ಸಾಹಕ್ಕೆ ನಿಲ್ಲುತ್ತೇನೆ. ಕನ್ನಡ ಸಿನಿಮಾಗಳಿಗೆ 100% ತೆರಿಗೆ ವಿನಾಯ್ತಿ ಘೋಷಿಸಿದ್ದು ನಾನೇ ಎಂದರು.ಪಿ.ಲಂಕೇಶ್ ಅವರು ನನಗೆ ಗುರುಗಳ ರೀತಿ. ಪತ್ರಿಕೆ ಕಚೇರಿಗೆ ಹೋಗಿ ಮಾರ್ಗದರ್ಶನ ಪಡೆಯುತ್ತಿದ್ದೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ನಟ ರಮೇಶ್ ಅರವಿಂದ್, ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಿರ್ದೇಶಕಿ ಕವಿತಾ ಲಂಕೇಶ್ , ಹಿರಿಯ ಪತ್ರಕರ್ತ ಸಮೀವುಲ್ಲಾ , ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಮತ್ತು ಕೃತಿಯ ಲೇಖಕರಾದ ಸದಾಶಿವ ಶೆಣೈ, ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಉಪಸ್ಥಿತರಿದ್ದರು.
PublicNext
07/01/2025 11:00 pm