ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ 6 ಮಂದಿ ನಕ್ಸಲರು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾದರು. ಸಿಎಂ ಸಿದ್ದರಾಮಯ್ಯಗೆ ಶರಣಾಗತಿ ಪತ್ರ ನೀಡುವ ಮೂಲಕ ನಕ್ಸಲಿಸಂ ತ್ಯಜಿಸಿದರು. ಮುಖ್ಯ ವಾಹಿನಿಗೆ ಬರಲು ಸಿಎಂ ಕಾರಣ,
ಮನ ಪರಿವರ್ತನೆಯಾಗಿ ಬಂದಿದ್ದೇವೆ ಎಂದು ನಕ್ಸಲ್ ಉಡುಪನ್ನು ಸಿಎಂ ಸಿದ್ದರಾಮಯ್ಯಗೆ ಒಪ್ಪಿಸಿದರು. ಶರಣಾದ 6 ನಕ್ಸಲರಿಗೆ ಸಿಎಂ ಸಂವಿಧಾನ ಪುಸ್ತಕ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ, ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ಮಾವೋ ನಕ್ಸಲ್ ಚಳುವಳಿಯಲ್ಲಿ ನಡೆದು ಕಾಡಿನಲ್ಲಿ ಇದ್ದು ಚಳುವಳಿ ಮಾಡ್ತಿದ್ದ 6 ಮಂದಿ ನಕ್ಸಲರು ಶರಣಾಗತಿಯಾಗುತ್ತಿದ್ದಾರೆ. ಸರ್ಕಾರ ಅವರಿಗೆ ಆಹ್ವಾನ ನೀಡಿದ್ದರಿಂದ 6 ಜನರೂ ಕೂಡ, ಅವರ ಹೋರಾಟದ ಹಾದಿ ಬಿಟ್ಟು, ಮುಖ್ಯವಾಹಿನಿಗೆ ಬರಲು ತೀರ್ಮಾನ ಮಾಡಿದ್ದಾರೆ.
ಲತಾ ಮುಂಡುಗಾರು ಚಿಕ್ಕಮಗಳೂರು ಜಿಲ್ಲೆ, ಸುಂದರಿ ಕುತ್ಲೂರು ದಕ್ಷಿಣ ಕನ್ನಡ ಜಿಲ್ಲೆ, ವನಜಾಕ್ಷಿ ಬಾಳೆಹೊಳೆ ಚಿಕ್ಕಮಗಳೂರು ಜಿಲ್ಲೆ, ಮಾರಪ್ಪ ಆರೋಲಿ ರಾಯಚೂರು ಜಿಲ್ಲೆ, ಜಿಶಾ ವಯನ್ನಾಡು ಕೇರಳ ರಾಜ್ಯ, ಕೆ.ವಸಂತ್ ವೆಲ್ಲೂರು , ತಮಿಳುನಾಡು
ಈ ಆರು ಜನರು ಶರಣಾಗಿದ್ದಾರೆ ಎಂದು ವಿವರ ನೀಡಿದರು.
ನನ್ನನ್ನು ಕೆಲವು ದಿನಗಳ ಹಿಂದೆ ನಾಗರಿಕರ ಪುನರ್ವಸತಿ ಸಮಿತಿ ಭೇಟಿಯಾಗಿದ್ರು. ಅರು ಮಂದಿ ನಕ್ಸಲರು ಶರಣಾಗತಿಗೆ ತೀರ್ಮಾನ ಮಾಡಿದ್ದಾರೆ. ನೀವು ಅವರನ್ನು ಆಹ್ವಾನ ಮಾಡಬೇಕಂತ ಹೇಳಿದ್ರು. ಆಗ ಪತ್ರಿಕಾ ಹೇಳಿಕೆ ಕೊಟ್ಟೆ, ಅವರು ಶರಣಾದ್ರೆ ಕಾನೂನು ಚೌಕಟ್ಟಿನಲ್ಲಿ ಅವರಿಗೆ ಯೋಜನೆ ಪ್ರಕಾರ ಆಯಾ ಕೆಟಗರಿ ಆಧಾರದ ಮೇಲೆ ಪರಿಹಾರ ಕೊಡ್ತೀವಿ. ಕಾಡಿನಿಂದ ಜೈಲಿಗೆ, ಜೈಲಿನಿಂದ ನಾಡಿಗೆ ಬರಲಿಕ್ಕೆ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತೆ. ಕಾನೂನು ಬಿಟ್ಟು ಕೆಲಸ ಮಾಡಲು ಸಾಧ್ಯ ಆಗೊಲ್ಲ. ಎಲ್ಲಾ ರೀತಿಯ ಸಹಕಾರ ಸರ್ಕಾರ ಕೊಡುತ್ತೆ.
ಅನ್ಯಾಯದ ವಿರುದ್ಧ ಶಸ್ತ್ರಾಸ್ತ್ರ ಮೂಲಕ ಹೋರಾಟ ಮಾಡ್ತಿದ್ರು. ಅದರ ಮೂಲಕ ನ್ಯಾಯ ಪಡೆಯೋಕೆ ಸಾಧ್ಯವಿಲ್ಲ. ಸಂವಿಧಾನದಲ್ಲಿ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡೋದಕ್ಕೆ ಅವಕಾಶ ಇದೆ. ಇದನ್ನಲ್ಲಾ ಅವರಿಗೆ ಹೇಳಿ ಮುಖ್ಯವಾಹಿನಿಗೆ ಬರೋದಕ್ಕೆ ಬಹಳ ಪ್ರಯತ್ನ ಆಗಿದೆ. ನಮ್ಮ ಸರ್ಕಾರವು ಕರ್ನಾಟಕವನ್ನು ನಕ್ಸಲ್ ಮುಕ್ತ ಕರ್ನಾಟಕ ಮಾಡೋದು ನಮ್ಮ ಉದ್ದೇಶ. ಅನೇಕ ರಾಜ್ಯಗಳಲ್ಲಿ ಇಂತಹ ಪ್ರಯತ್ನ ಆಗಿದೆ. ಇವತ್ತು ಸರ್ಕಾರ ಅವರನ್ನು ಒಪ್ಪಿ, ಜಿಲ್ಲಾಧಿಕಾರಿ ಮುಂದೆ ಪ್ರೊಡ್ಯೂಸ್ ಮಾಡಿದ್ದಾರೆ.
ಅವರಿಗೆ ಏನ್ ಕೊಡಬೇಕು ಅನ್ನೋದನ್ನು ಹೇಳಿದ್ದಾರೆ. ಆ ಆದೇಶವನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮಾಡಿದ್ದಾರೆ. ನಮ್ಮೆಲ್ಲರ ಮುಂದೆ ಅವರು ಶರಣಾಗಿದ್ದಾರೆ, ನಾವು ಒಪ್ಪಿದ್ದೇವೆ. ಶಾಂತಿಗಾಗಿ ನಾಗರಿಕ ಸಮಿತಿ, ಪುನರ್ವಸತಿ ಸಮಿತಿಯವರಿಗೆ, ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದಗಳು. ಎಡಿಜಿಪಿ ನಿಂಬಾಳ್ಕರ್ ಸಾಕಷ್ಟು ಪ್ರಯತ್ನ ಮಾಡಿದ್ರು. ಮೂರ್ನಾಲ್ಕು ದಿನಗಳ ಹಿಂದೆಯೇ ಶರಣಾಗತಿ ಬಗ್ಗೆ ನಿಂಬಾಳ್ಕರ್ ಹೇಳಿದ್ರು. ಅಲೋಕ್ ಮೋಹನ್, ಮೊಹಂತಿ ನಿನ್ನೆ ಬಂದು ಹೇಳಿದ್ರು. ಯಾರೆಲ್ಲಾ ಶರಣಾಗಿದ್ದಾರೆ ಅವರಿಗೆ ಶುಭವಾಗಲಿ. ಶರಣಾಗತಿಯಾದವರ ಅಹವಾಲು, ಎಲ್ಲಾ ಒತ್ತಾಯಗಳನ್ನು ಸಹಾನುಭೂತಿಯಿಂದ ಸರ್ಕಾರ ಪರಿಗಣಿಸುತ್ತೆ ಎಂದು ಅಭಯ ನೀಡಿದರು.
PublicNext
08/01/2025 09:38 pm