ಹಾಸನ: ಬೇರೆ ಯಾವುದೇ ದೇಶ ಹಾಗೂ ರಾಜ್ಯ ಹೊಂದಿರದ ಐತಿಹಾಸಿಕ ಪರಂಪರೆ ಹೊಂದಿರುವ ಶ್ರೇಷ್ಠವಾದ ಕನ್ನಡ ಭಾಷೆ ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ತಾನು ಮತ್ತೆ ಹುಟ್ಟಬೇಕು ಎಂದು ಬಯಸಿದ್ದೇನೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಇಂದು ಆಯೋಜಿಸಲಾಗಿದ್ದ ಹಾಸನ ಸಾಹಿತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಭಾರತ ದೇಶದ ಸಾಹಿತ್ಯಕ್ಕೆ ಹಿರಿಮೆ ವಿಶ್ವಕ್ಕೆ ಮಾದರಿಯಾಗಿದೆ ನಮ್ಮ ದೇಶ ಇತರ ದೇಶಗಳೊಂದಿಗೆ ಹೊಂದಿರುವ ಸಂಬಂಧ ನೋಡಿದಾಗ ಹೆಮ್ಮೆ ಎನಿಸುತ್ತದೆ. ವಚನ ಸಾಹಿತ್ಯ ಪ್ರಪಂಚದ 56 ದೇಶಗಳ ಪೈಕಿ ಕೆಲವು ವಿಶ್ವ ವಿದ್ಯಾನಿಲಯಗಳಲ್ಲಿ ಯಾವುದೇ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ ಜೊತೆಗೆ ಕೆಲವು ದೇಶಗಳಲ್ಲಿ ಅದು ಪಠ್ಯವಾಗಿ ಬಳಕೆಯಾಗುತ್ತಿದೆ ಇದು ನಮ್ಮ ಕನ್ನಡ ನಾಡಿನ ಹಿರಿಮೆಯನ್ನು ತೋರಿಸುತ್ತದೆ ಎಂದರು.
ಕನ್ನಡ ಭಾಷೆಯನ್ನು ರಕ್ಷಿಸಿ ಘಟ್ಟಿಗೊಳಿಸುವ ಜೊತೆಗೆ ಇತರ ಭಾಷೆಯನ್ನು ಕಲಿಯುವ ಮೂಲಕ ಸ್ವಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದರಿಂದ ಮಾತ್ರ ಕನ್ನಡ ಉಳಿವು ಸಾಧ್ಯ. ಪ್ರಪಂಚದ ವಿವಿಧ ದೇಶಗಳಲ್ಲಿ ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ವಿಶೇಷವಾದ ಸ್ಥಾನಮಾನ ಲಭಿಸಿದೆ ಎಂದರು.
ಕನ್ನಡದಲ್ಲಿ ಮಾಡುವ ಸರಳವಾದ ಕಥೆ ರಚನೆ ಬೇರೆ ಭಾಷೆಗಳಲ್ಲಿ ಸಾಧ್ಯವಿಲ್ಲ ವಿವಿಧ ದೇಶಗಳ ಹೆಣ್ಣು ಮಕ್ಕಳನ್ನು ಬಳಸಿಕೊಂಡು ನಡೆಸಿದ ಕಥೆ ರಚನೆ ಬಗ್ಗೆ ಅಮೆರಿಕದಲ್ಲಿ ನಡೆದ ಅಧ್ಯಯನದಿಂದ ಇದು ಬಹಿರಂಗವಾಗಿದೆ ಎಂದರು.
ಹಿರಿಯ ಸಾಹಿತಿ ಹಂ.ಪ ನಾಗರಾಜಯ್ಯ ಅವರು ಮಾತನಾಡಿ, ಕರ್ನಾಟಕದಲ್ಲಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ಕ್ರಿ.ಶ 620 ನೇ ಕಾಲದಲ್ಲಿ ಸಾಹಿತ್ಯ ಸಂಭ್ರಮ ಆರಂಭವಾಗಿತ್ತು. 1200 ವರ್ಷಗಳ ಹಿಂದೆ ಪಂಪನ ಅಧ್ಯಕ್ಷತೆ ಯಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ಮೊದಲ ಬಾರಿಗೆ ನಾಡೋಜ ಪ್ರಶಸ್ತಿ ವಿತರಣೆ ಅಂದಿನಿಂದ ಆರಂಭವಾದ ಕನ್ನಡ ಸಾಹಿತ್ಯ ಸಂಬ್ರಮ ಇಂದು ದೇಶಾದ್ಯಂತ ಪಸರಿಸಿದೆ ಎಂದರು.
ಹಲವರ ಪರಿಶ್ರಮದಿಂದ ಕನ್ನಡ ಒಳ್ಳೆಯ ಸ್ಥಾನಮಾನ ಗಳಿಸಿದೆ, ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬಾಲ್ಯದಿಂದಲೇ ಮಕ್ಕಳಿಗೆ ಕನ್ನಡದ ಪ್ರಾಮುಖ್ಯತೆ ಬಗ್ಗೆ ಮನವರಿಕೆ ಮಾಡಿಕೊಡಬೇಕು, ಪ್ರಪಂಚದಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಕನ್ನಡ ಭಾಷಾ ಪರಂಪರೆ ಇನ್ನಷ್ಟು ವಿಜೃಂಬಿಸಬೇಕು ಈ ನಿಟ್ಟಿನಲ್ಲಿ ಎಲ್ಲಾ ಕನ್ನಡ ಮನಸ್ಸುಗಳು ಇನ್ನಷ್ಟು ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಸ್ವರೂಪ್ ಪ್ರಕಾಶ್, ಡಿಸಿ ಸತ್ಯಭಾಮಾ, ಹಿರಿಯ ಸಾಹಿತಿಗಳಾದ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಕೋಶಾಧ್ಯಕ್ಷ ಪಟೇಲ್ ಪಾಂಡು, ಕಸಾಪ ಜಿಲ್ಲಾಧ್ಯಕ್ಷ ಡಾ. ಎಚ್. ಎಲ್ ಮಲ್ಲೇಶ್ ಗೌಡ, ಹಿರಿಯ ಸಾಹಿತಿ ಬಿ.ಆರ್ ಲಕ್ಷ್ಮಣ್, ಬರಹಗಾರ ಗಿರೀಶ್ ರಾವ್ ಅತ್ತಾರ್, ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಸೇರಿದಂತೆ ಇತರರು ಇದ್ದರು.
Kshetra Samachara
06/01/2025 04:57 pm