ಹಾಸನ : ತಾಲೂಕಿನ ಸಾಲಗಾಮೆ ಹೋಬಳಿ ವೀರಾಪುರ ಗ್ರಾಮದಲ್ಲಿ ಇಂದು 6 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು.
ಭೂಮಿ ಪೂಜೆ ಅಂಗವಾಗಿ ಗ್ರಾಮಕ್ಕೆ ಆಗಮಿಸಿದ ಸ್ವರೂಪ್ ಗೆ ಗ್ರಾಮಸ್ಥರು ಅಭೂತಪೂರ್ವ ಸ್ವಾಗತ ಕೋರಿದರು. ಬಳಿಕ ಗುದ್ದಲಿ ಪೂಜೆಯಲ್ಲಿ ಗ್ರಾಮಸ್ಥರು ಹಾಗೂ ಗುತ್ತಿಗೆದಾರರು ಪಾಲ್ಗೊಂಡು ಪೂಜೆ ಸಲ್ಲಿಸಿ ಶಾಸಕರಿಗೆ ಸಾತ್ ನೀಡಿದರು.
ಬಳಿಕ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ತಾಲೂಕಿನ ವೀರಾಪುರ ಗ್ರಾಮದಿಂದ ಕಡದರವಳ್ಳಿ ಗ್ರಾಮದ ಮೂಲಕ ಬೇಲೂರು ರಸ್ತೆ ಸಂಪರ್ಕಿಸುವ ಸುಮಾರು 6 ಕಿ.ಮೀ ರಸ್ತೆ ಕಾಮಗಾರಿ ಇದಾಗಿದ್ದು ಗುಣಮಟ್ಟದ ರಸ್ತೆ ಕಾಮಗಾರಿ ಮಾಡುವಂತೆ ಸಂಭಂದಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ ಎಂದರು.
ಈ ರಸ್ತೆ ಕಾಮಗಾರಿಯಿಂದ ಸಾವಿರಾರು ಸಂಖೆಯ ಗ್ರಾಮಸ್ಥರಿಗೆ ಅನುಕೂಲವಾಗಲಿದೆ, ರಸ್ತೆ ಹಾಳಾಗಿದ್ದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಮಸ್ಥರು ಪರದಾಡುವಂತಾಗಿತ್ತು. ಇದನ್ನು ಮನಗಂಡು ಗ್ರಾಮಸ್ಥರ ಮನವಿ ಮೇರೆಗೆ ಈ ಕಾಮಗಾರಿ ಕೈಗೊಳ್ಳಲಾಗಿದೆ, ಇದಲ್ಲದೆ ಸುತ್ತಮುತ್ತಲ ಗ್ರಾಮಗಳಲ್ಲಿ ಹಲವು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದ್ದೇನೆ ಅವುಗಳ ನಿವಾರಣೆಗೆ ಶೀಘ್ರವಾಗಿ ಕ್ರಮ ವಹಿಸುವೆ ಎಂದರು.
ಸರ್ಕಾರದ ಅನುದಾನ ಕಡಿಮೆ ಇರುವ ನಡುವೆಯೂ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಬೇಕಿರುವ ಅಭಿವೃದ್ದಿ ಕೆಲಸಗಳ ಬಗ್ಗೆ ಮುತುವರ್ಜಿ ವಹಿಸಿ ಕೆಲಸ ಮಾಡಲಾಗುತ್ತಿದೆ. ಶಾಸಕರ ಅನುದಾನ ಹಾಗೂ ವಿವಿಧ ಇಲಾಖೆ ಅಡಿಯಲ್ಲಿ ಇರುವ ಅನುದನವನ್ನೇ ಬಳಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಈ ವೇಳೆ ಕಂಟ್ರಾಕ್ಟರ್ ಹೇಮಂತ್, ವೀರಾಪುರ ನಾಗರಾಜ್, ಬಾಲು, ಆದಿ, ವಿಜಯ್, ಮಲ್ಲಿಕ್, ಪವನ್, ಮಂಜುನಾಥ್, ಗುಳ್ಳೆನಹಳ್ಳಿ ಅಬ್ದುಲ್ ಸತ್ತಾರ್, ಫರೀದ್, ನಸ್ರುಲ್ಲ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು.
Kshetra Samachara
07/01/2025 01:05 pm