ಹಾಸನ: ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅಧಿಕಾರಿಗಳ ಹತ್ತಿರ ಬರುವ ಬದಲಾಗಿ ಅಧಿಕಾರಿಗಳೇ ಜನರತ್ತ ಆಗಮಿಸಿ ಅವರ ಅಹವಾಲುಗಳನ್ನು ಸ್ವೀಕರಿಸಲು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರ ಸಣ್ಣ - ಸಣ್ಣ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಸಿಗಲಿದೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು.
ಶಾಸಕರ ನಡೆ ಜನರ ಕಡೆ ಎಂಬ ಘೋಷ ವಾಕ್ಯದ ಅಡಿಯಲ್ಲಿ ಹಾಸನ ತಾಲೂಕಿನ ಸಾಲಗಾಮೆ ಯಲ್ಲಿ ಇಂದು ನಡೆದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತ ಹಾಗೂ ಸೈನಿಕರು ಈ ದೇಶದ ಬೆನ್ನೆಲುಬು ಅವರ ಯಾವುದೇ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುವುದು ಎಲ್ಲರ ಕರ್ತವ್ಯವಾಗಿದೆ. ರೈತರ ಯಾವುದೇ ಸಮಸ್ಯೆಗಳನ್ನು ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಾರದು ಎಂದರು.
ಹಾಸನ ನಗರ ಪಾಲಿಕೆಯಾಗಿ ಘೋಷಣೆಯಾದ ಬಳಿಕ ತಾಲೂಕಿನ ಶೇಕಡಾ 50 ರಷ್ಟು ಹಳ್ಳಿಗಳು ನಗರ ಪಾಲಿಕೆಗೆ ಒಳಪಡುವುದರಿಂದ ಅನೇಕ ಸಮಸ್ಯೆಗಳು ಎದುರಾಗಿವೆ, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಪ್ರತಿಯೊಬ್ಬರ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ಮಾರ್ಗೋಪಾಯ ಸೂಚಿಸಲಾಗುವುದು.ಎಲ್ಲಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಇಲ್ಲಿಯೇ ಪರಿಹಾರ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಆರೋಗ್ಯವಾಗಿದ್ದಾಗ ಮಾತ್ರ ಕೆಲಸ ಮಾಡಲು ಸಾಧ್ಯ ಈ ನಿಟ್ಟಿನಲ್ಲಿ ರೈತರ ಗ್ರಾಮೀಣ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ನಗರಸಭೆ, ಶಿಕ್ಷಣ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ತಮ್ಮ ಸಮಸ್ಯೆಗಳ ಬಗ್ಗೆ ಕ್ಷೇತ್ರದ ವ್ಯಾಪ್ತಿಯ ಜನರು ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ಮನವರಿಕೆ ಮಾಡಿಕೊಟ್ಟರು. ಈ ವೇಳೆ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿ ಇನ್ನು ಕೆಲವು ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಸಂಭಂದಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಹಾಸನ ತಾಲೂಕು ತಾಸಿಲ್ದಾರ್ ಮೇಘನ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರುಕ್ಮಿಣಿ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಂಶುದ್ದೀನ್, ಹಾಗೂ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.
Kshetra Samachara
06/01/2025 04:54 pm