ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬಿಆರ್‌ಟಿಎಸ್ ರಸ್ತೆಯಲ್ಲಿ ಖಾಸಗಿ ವಾಹನ ಸಂಚಾರ - ಶಾಸಕ ಬೆಲ್ಲದ್ ನೀಡಿದ ಸಲಹೆ ಏನು ಗೊತ್ತಾ?

ಧಾರವಾಡ: ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದ ಮಧ್ಯೆ ತ್ವರಿತಗತಿಯಲ್ಲಿ ಬಸ್ ಸಂಚಾರ ಇರುವ ಬಿಆರ್‌ಟಿಎಸ್ ಚಿಗರಿ ಸಂಚಾರ, ಒಂದಿಲ್ಲೊಂದು ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುತ್ತದೆ. ಅವೈಜ್ಞಾನಿಕ ಯೋಜನೆಯಿಂದಾಗಿ ಈಗಾಗಲೇ ಜನ ರೋಸಿ ಹೋಗಿದ್ದಾರೆ. ಈ ಮಧ್ಯೆ ಸ್ಥಳೀಯ ಶಾಸಕರೊಬ್ಬರು ಬಿಆರ್‌ಟಿಎಸ್ ಅಧಿಕಾರಿಗಳಿಗೆ ನೀಡಿದ್ದಾರೆನ್ನಲಾದ ಸಲಹೆಯೊಂದು ಈಗ ಹೊಸ ವಿವಾದ ಹುಟ್ಟು ಹಾಕಿದೆ.

ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಜನರಿಗೆ ಉಪಯೋಗ ಆಗಲಿ ಅಂತಾ ಆರಂಭಗೊಂಡಿರೋ ಚಿಗರಿ ಬಸ್‌ನ ಸೇವೆಯಿಂದ ಜನರಿಗೆ ಉಪಯೋಗ ಆಗುತ್ತಿದ್ದರೂ, ಉಳಿದ ವಾಹನ ಸವಾರರಿಗೆ ತೊಂದರೆ ಆಗುತ್ತಲೇ ಇದೆ. ಮುಖ್ಯವಾಗಿ ಈ ಚಿಗರಿ ಬಸ್‌ಗಳಿಗೆ ವಿಶಾಲ ರಸ್ತೆ ಇದ್ರೆ, ಉಳಿದ ವಾಹನಗಳ ಓಡಾಟಕ್ಕೆ ಕಿರಿದಾದ ರಸ್ತೆ. ಇದೇ ಕಾರಣಕ್ಕೆ ಈ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ನಗರದೊಳಗೆ ಉಳಿದ ವಾಹನಗಳ ಓಡಾಟಕ್ಕೂ ಅವಕಾಶ ಕೊಡಬೇಕು ಎನ್ನುವ ಹೋರಾಟ ಶುರುವಾಗಿತ್ತು. ಆದರೆ ಈಗ ಅದಕ್ಕೆ ಪೂರಕವಾಗಿ ಹೊಸ ಸಲಹೆಯೊಂದನ್ನು ಶಾಸಕ ಅರವಿಂದ ಬೆಲ್ಲದ್, ಬಿಆರ್‌ಟಿಎಸ್ ಅಧಿಕಾರಿಗಳಗೆ ನೀಡಿದ್ದಾರಂತೆ. ಅದೇನಂದ್ರೆ, ಈ ಕಾರಿಡಾರ್‌ನಲ್ಲಿ ಚಿಗರಿ ಬಸ್ ಜೊತೆಗೆ ಉಳಿದ ಬಸ್‌ಗಳೂ ಓಡಾಡಬೇಕು. ಅಲ್ಲದೇ ಕಾರು, ಬೈಕ್‌ಗಳಿಗೆ ಟೋಲ್ ತೆಗೆದುಕೊಂಡು ಓಡಾಡೋಕೆ ಅವಕಾಶ ಕೊಡಬೇಕಂತೆ. ಹೀಗೆ ಮಾಡಿದ್ರೆ ಬಿಆರ್‌ಟಿಎಸ್‌ಗೂ ಆದಾಯ ಬರುತ್ತದೆ ಅನ್ನೋದು ಬೆಲ್ಲದ್ ಅವರ ಸಮರ್ಥನೆ.

ಆದರೆ ಶಾಸಕ ಬೆಲ್ಲದ್ ಬಿಆರ್‌ಟಿಎಸ್ ಅಧಿಕಾರಿಗಳಿಗೆ ನೀಡಿದ್ದಾರೆನ್ನಲಾದ ಈ ಟೋಲ್ ಆಕರಣೆ ಸಲಹೆ ಈಗ ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಸಂಘಟನೆಗಳು ಬೆಲ್ಲದ್ ಅವರ ಈ ಹೇಳಿಕೆಗೆ ಈಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಲ್ಲದ್ ಅವರು, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ, ಸರ್ಕಾರದ ಟೋಲ್ ಆಕರಣೆಯಂತಹ ಯೋಜನೆಗಳನ್ನು ವಿರೋಧಿಸಬೇಕಾದವರು. ಆದರೆ ಅವರೇ ಸರ್ಕಾರಕ್ಕೆ ಹೀಗೆ ಟೋಲ್ ಆಕರಣೆ ಮಾಡೋ ಐಡಿಯಾ ಕೊಟ್ಟರೆ ಹೇಗೆ? ಎಂಬ ಪ್ರಶ್ನೆಗಳು ಈಗ ಉದ್ಭವಿಸಿದ್ದು, ಈ ಕೂಡಲೇ ಬೆಲ್ಲದ್ ಅವರು ತಮ್ಮ ಸಲಹೆ ವಾಪಸ್ ಪಡೆಯಬೇಕು. ಇಲ್ಲದೇ ಹೋದಲ್ಲಿ ಇದರ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ.

ಒಟ್ಟಾರೆಯಾಗಿ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಬಿಆರ್‌ಟಿಎಸ್ ಯೋಜನೆ ಈಗ ಶಾಸಕರ ಟೋಲ್ ಆಕರಣೆ ಸಲಹೆ ಕಾರಣಕ್ಕೆ ಮತ್ತೇ ವಿವಾದವೊಂದನ್ನು ಮೈಮೇಲೆ ಹಾಕಿಕೊಂಡಿದ್ದು, ಇದು ಎಲ್ಲಿಗೆ ಬಂದು ನಿಲ್ಲುತ್ತೋ ಅನ್ನೋದನ್ನು ಕಾದು ನೋಡಬೇಕಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

06/01/2025 02:42 pm

Cinque Terre

71.93 K

Cinque Terre

29

ಸಂಬಂಧಿತ ಸುದ್ದಿ