ಮಡಿಕೇರಿ: ಯಾವುದೇ ಜಾತಿ, ಜನಾಂಗ ಅಥವಾ ಒಂದು ವರ್ಗಕ್ಕೆ ಸೀಮಿತವಾದ ಸಂಪ್ರದಾಯಗಳಿಗೆ ಆದ್ಯತೆ ನೀಡದೆ ದೇವರ ಸನ್ನಿಧಿಯಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ಶ್ರೀಮಹಾಮೃತ್ಯುಂಜಯ ದೇವಾಲಯ ಸಮಿತಿ ರೂಪಿಸಿರುವ ಕಟ್ಟುಪಾಡುಗಳಿಗೆ ನಾವು ಬದ್ಧ ಎಂದು ಕಟ್ಟೆಮಾಡು ಗ್ರಾಮದ ಗೌಡ ಸಮುದಾಯ ಸ್ಪಷ್ಟಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಪ್ಪಯಂಡ್ರ ಮಣಿ ಮುತ್ತಪ್ಪ ಅವರು ಡಿ.27ರಂದು ದೇವಾಲಯದ ಜಾತ್ರಾ ಮಹೋತ್ಸವದ ಸಂದರ್ಭ ದೇವರು ಜಳಕಕ್ಕೆ ಹೊರಡುವಾಗ ದೇವಾಲಯ ಸಮಿತಿಯ ನಿಯಮವನ್ನು ಮೀರಿ ಕೆಲವರು ಉದ್ದೇಶಪೂರ್ವಕವಾಗಿ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದಾರೆ. ಇದು ದೇವಾಲಯದ ಅಧಿಕಾರ ಹಿಡಿಯುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಸಂಘರ್ಷ ನಡೆಯುವ ಸಂದರ್ಭ ಎರಡೂ ಕಡೆಯಿಂದ ಮಾತಿಗೆ ಮಾತು ಬೆಳೆದಿದೆ, ತಳ್ಳಾಟವಾಗಿದೆ. ಆದರೆ ಯಾರ ಮೇಲೂ ಹಲ್ಲೆಯಾಗಿಲ್ಲ, ಯಾರನ್ನೂ ದೇವಾಲಯದ ಒಳಗೆ ಬರಬೇಡಿ ಎಂದು ಹೇಳಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿನಾಕಾರಣ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ದೇವಾಲಯದ ಸಿಸಿ ಕ್ಯಾಮರಾದಲ್ಲಿ ಸತ್ಯಾಂಶ ಸೆರೆಯಾಗಿದ್ದು, ಯಾರು ಬೇಕಾದರೂ ಪರಿಶೀಲಿಸಬಹುದು ಎಂದು ಹೇಳಿದರು.
Kshetra Samachara
06/01/2025 09:26 am