ಮಡಿಕೇರಿ: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ್ಕೇರಿ ಬಸ್ ನಿಲ್ದಾಣ ಮತ್ತು ಮಾರುಕಟ್ಟೆ ಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸ್ಕೇರಿ ಗ್ರಾಮದಲ್ಲಿ ನೆಲೆಸಿರುವ ಅಸ್ಸಾಂ ರಾಜ್ಯ ಮೂಲದ ಸೋಫಿಕುಲ್ ಇಸ್ಲಾಂ (24), ಇಮ್ತಿಯಾಜ್ ಆಲಿ (20) ರೋಹಿಥಾನ್ (50) ಹಾಗೂ ಕೋಣನಕಟ್ಟೆ-ಸುಳುಗೋಡು ಗ್ರಾಮದ ನಿವಾಸಿ ಯೂಸೂಫ್ ಆಲಿ (32) ಬಂಧಿತ ಆರೋಪಿಗಳು. ಇವರ ಬಳಿಯಿಂದ 2 ಕೆ.ಜಿ 481 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಗಾಂಜಾ ಮಾರಾಟದ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆ ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಮಹೇಶ್‌ಕುಮಾರ್, ಮಡಿಕೇರಿ ನಗರ ಸಿಪಿಐ ರಾಜು.ಪಿ.ಕೆ, ಸಿದ್ದಾಪುರ ಪಿಎಸ್‌ಐ ರಾಘವೇಂದ್ರ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ಸಾಗಾಟ ಅಥವಾ ಮಾರಾಟದ ಕುರಿತು ಮಾಹಿತಿ ಇದ್ದರೆ ಪೊಲೀಸರ ಗಮನಕ್ಕೆ ತರುವಂತೆ ಎಸ್‌ಪಿ ಮನವಿ ಮಾಡಿದ್ದಾರೆ.
PublicNext
07/01/2025 03:18 pm