ಸೋಮವಾರಪೇಟೆ: ಡಿಸೆಂಬರ್ 24ರಂದು ಸಂಜೆ ಜಮ್ಮು & ಕಾಶ್ಮೀರದಲ್ಲಿ ನಡೆದ ಸೇನಾ ವಾಹನ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಸೇನಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ಯೋಧ ದಿವಿನ್ (28) ನಿನ್ನೆ ರಾತ್ರಿ 9.50 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಕಳೆದ 5 ದಿನಗಳಿಂದ ಸೇನಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ದಿವಿನ್, ಕೊನೆಗೂ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.
ಸೋಮವಾರಪೇಟೆ ತಾಲೂಕು ಆಲೂರುಸಿದ್ದಾಪುರದ ಮಾಲಂಬಿ ನಿವಾಸಿ ಪಳಂಗೋಟು ದಿ. ವಸಂತ ಪ್ರಕಾಶ್ ಹಾಗೂ ಜಲಜಾಕ್ಷಿ ಅವರ ಪುತ್ರ ದಿವಿನ್ (28) ಮರಾಟ ಇನ್ವೆಂಟ್ರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಾ. 24ರಂದು ಸಂಜೆ 5.20ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ಘರೋವಾ ಪ್ರದೇಶದಲ್ಲಿ ಸೇನಾ ವಾಹನ ಅವಘಡಕ್ಕೀಡಾಗಿ 300 ಅಡಿಗಳಷ್ಟು ಆಳದ ಕಮರಿಗೆ ಉರುಳಿ ಬಿದ್ದಿದ್ದು, ಐವರು ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದೇ ಟ್ರಕ್‌ನಲ್ಲಿದ್ದ ದಿವಿನ್ ಸೇರಿದಂತೆ ಇತರ ಐವರು ಯೋಧರು ಗಂಭೀರ ಗಾಯಗೊಂಡಿದ್ದರು. ಘರೋವಾ ಪ್ರದೇಶದಲ್ಲಿ ಸಂಜೆ 5.20ರ ಸುಮಾರಿಗೆ ಆರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿರುವ ಸೇನಾ ವಾಹನವು ಬನೋಯ್‌ಗೆ ತೆರಳುತ್ತಿದ್ದ ಸಂದರ್ಭ ಘರೋವಾ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು.
ಸೇನಾ ಕರ್ತವ್ಯದಲ್ಲಿದ್ದ ಮಾಲಂಬಿ ಗ್ರಾಮದ ದಿವಿನ್ ಅವರಿಗೆ ಅವಘಡದಿಂದಾಗಿ ತಲೆ, ಕುತ್ತಿಗೆ, ಬೆನ್ನು ಹಾಗೂ ಶ್ವಾಸಕೋಶಕ್ಕೆ ತೀವ್ರ ಪೆಟ್ಟಾಗಿ, ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ದಿವಿನ್ ಅವರ ತಾಯಿಜಲಜಾಕ್ಷಿ ಅವರಿಗೆ ಸೈನ್ಯದಿಂದ ಮಾಹಿತಿ ದೊರೆತು ಅವರು ಜಮ್ಮು ಕಾಶ್ಮೀರಕ್ಕೆ ತೆರಳಿದ್ದರು. ಆದರೆ ಚಿಕಿತ್ಸೆ ಫಲಿಸದೇ ದಿವಿನ್ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
PublicNext
30/12/2024 08:26 am