ಮಡಿಕೇರಿ: ಮಸೀದಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.
ವಿರಾಜಪೇಟೆ ನಗರದ ಸುಣ್ಣದ ಬೀದಿಯ ನಿವಾಸಿ ಮಹಮ್ಮದ್ ಶೋಯಲ್ (32) ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ ಧ್ವನಿವರ್ಧಕಕ್ಕೆ ಅಳವಡಿಸುವ ಸಾಧನ, ಅದರ ಸಲಕಲರಣೆಗಳು ಮತ್ತು ರೂ.3 ಸಾವಿರ ನಗದನ್ನು ವಶಪಡಿಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 19-12-2024 ರಂದು ಇಂದಿರಾ ಬಡಾವಣೆಯ ಮಸೀದಿಯಲ್ಲಿಟ್ಟಿದ್ದ ಕಾಣಿಕೆ ಹುಂಡಿಯನ್ನು ಮತ್ತು ಮಸೀದಿಯ ಧ್ವನಿ ವರ್ಧಕಕ್ಕೆ ಅಳವಡಿಸುವ ಸಾಧನ ಮತ್ತು ಉಪಕರಣವನ್ನು ಕಳ್ಳತನ ಮಾಡಿರುವ ಕುರಿತು ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಪೊಲೀಸ್ ಠಾಣೆಯ ಪಿಐ ಪ್ರಕಾಶ್.ಬಿ.ಜಿ, ಪಿಎಸ್‌ಐ ಗೀತಾ, ಅಪರಾಧ ಪತ್ತೆ ಸಿಬ್ಬಂದಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು.
ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬಂಧಿತ ಆರೋಪಿ ಮಡಿಕೇರಿ ಮತ್ತು ಪಿರಿಯಾಪಟ್ಟಣದ ಮಸೀದಿಗಳಲ್ಲಿ ಕಳ್ಳತನ ಮಾಡಿರುವ ಮಾಹಿತಿ ಬಹಿರಂಗಗೊಂಡಿದೆ. ಪಿರಿಯಾಪಟ್ಟಣ ಠಾಣಾ ವ್ಯಾಪ್ತಿಯ ಮಸೀದಿಯೊಂದರಲ್ಲಿ ಕಳ್ಳತನ ಮಾಡಿದ್ದ 2 ಆಂಪ್ಲಿಫೈರ್‌ಗಳು, ಡಿಜಿಟಲ್ ಎಕೋ ರಿವರ್ಸ್ ಮಿಕ್ಸರ್, ಮಾನಿಟರ್ ಹಾಗೂ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಯೊಂದರಿAದ ಕಳ್ಳತನ ಮಾಡಿದ ಒಂದು ಆಂಪ್ಲಿಫೈರ್, ಸೌಂಡ್ ಮಿಕ್ಸರ್ ಉಪಕರಣ ಮತ್ತು ಆರೋಪಿಯು ಕೃತ್ಯಕ್ಕೆ ಬಳಸಿದ 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಶ್ಲಾಘಿಸಿದ್ದಾರೆ.
PublicNext
08/01/2025 06:09 pm