ಮಂಡ್ಯ: ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಮಾತನಾಡುವ ಚಪಲ. ಅವ್ರು ಮಾತನಾಡಿದ್ರೆ ಉತ್ತರ ನೀಡಲು ತಡಕಾಡುವಂತಿರಬೇಕು. ಬೇರೆಯವರಿಂದ ಸಲಹೆ ತೆಗೆದುಕೊಂಡು ಮಾತನಾಡುವಂತಿರಬೇಕು. ಆದ್ರೆ, ಅವರು ಮಾತನಾಡಿದ್ರೆ ಉತ್ತರ ಕೊಡಬೇಕು ಅನ್ನಿಸುವುದಿಲ್ಲ ಅಂತ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ರು.
ಮಂಡ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಮಾತನಾಡಿದಾಗ ನಮಗೂ ಖುಷಿಯಾಗುವಂತಿರಬೇಕು. ಆದರೆ, ಅವರು ಬಾಯಿ ಚಪಲಕ್ಕೆ ಮಾತನಾಡ್ತಾರೆ. ಅವರಿಗೆ ಉತ್ತರ ಕೊಡಬೇಕು ಅನಿಸಲ್ಲ. ಜನರ ತೀರ್ಮಾನ ಅಂತಿಮ ಎನ್ನುವುದನ್ನು ಹೆಚ್ಡಿಕೆ ನಂಬ್ತಾರೆ ಅನ್ನೋದಾದ್ರೆ ಕಳೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ,
ಎಲ್ಲಾ ಸರ್ವೆಗಳನ್ನು ಮೀರಿ ಜನರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಈ ಫಲಿತಾಂಶ ಸರ್ಕಾರದ ಮೇಲಿನ ಜನರ ವಿಶ್ವಾಸ ತೋರಿಸುತ್ತದೆ. ಹಾಗಾಗಿ ಕೇಂದ್ರ ಸಚಿವರು ಅವರ ಗೌರವಕ್ಕೆ ತಕ್ಕಂತೆ ಮಾತನಾಡಬೇಕು. ಟೀಕೆ ಮಾಡುವುದೇ ನಾಯಕತ್ವ ಎನ್ನುವ ರೀತಿ ಮಾತನಾಡಬಾರದು ಅಂತ ಸಲಹೆ ನೀಡಿದ್ರು.
ರಾಜ್ಯ ಸರ್ಕಾರ ಕಾರು ಕೊಟ್ಟಿಲ್ಲ ಅಂತ ಕುಮಾರಸ್ವಾಮಿ ಆರೋಪ ಮಾಡಿ ಮಾತನಾಡ್ತಾರೆ. ಕುಮಾರಸ್ವಾಮಿಯಿಂದ ಈ ರೀತಿಯ ಮಾತು ನಾನು ನಿರೀಕ್ಷೆ ಮಾಡಿರಲಿಲ್ಲ. ನಾನು ಸಂಸದನಾಗಿದ್ದಾಗ ಅಂಬರೀಶ್ ಬಳಸುತ್ತಿದ್ದ ಕಾರು ಕೊಟ್ಟಿದ್ರು. ಹೊಸ ಕಾರು ಬರಲು ಒಂದು ವರ್ಷ ಬೇಕಾಯ್ತು. ಸಚಿವನಾದ ಮೇಲೂ ಹಳೆಯ ಕಾರನ್ನೇ ಬಳಸುತ್ತಿದ್ದೆ. ಇವ್ರು ಮಾಜಿ ಸಂಸದೆ ಸುಮಲತಾ ಕೂತಿದ್ದ ಕಾರ್ ಹತ್ತಲ್ಲ ಅಂದಿದ್ದಾರೆ. ಯಾಕೋ ಗೊತ್ತಿಲ್ಲ, ಕಾರು ಕೊಡಲು ಸರ್ಕಾರ ಕೆಲವು ನಿಯಮಗಳನ್ನು ಮಾಡಿವೆ. ಅದನ್ನು ಅನುಸರಿಸಬೇಕು.
ಕುಮಾರಸ್ವಾಮಿಯವರ ಇಂತಹ ಮಾತುಗಳಿಗೆ ನಾವು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಲಂಚ ಮುಟ್ಟದೆ, ಭ್ರಷ್ಟಾಚಾರ ಮಾಡದೆ ಇರುವ ಏಕೈಕ ರಾಜಕಾರಣಿ ಅಂದ್ರೆ ಇವರೊಬ್ಬರೇ ಅನ್ನೋ ರೀತಿ ಮಾತನಾಡುತ್ತಾರೆ ಅಂತ ಹರಿಹಾಯ್ದರು.
PublicNext
05/01/2025 06:16 pm