ಚಿಕ್ಕಮಗಳೂರು: ಮೂಡಿಗೆರೆ ಪಟ್ಟಣದಲ್ಲಿ ಶುಕ್ರವಾರ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವದ ಬಳಿಕ ಪಟ್ಟಣದ ಬಸ್ ನಿಲ್ದಾಣದ ಎದುರಿನ ತಾಲೂಕು ಕಚೇರಿ ರಸ್ತೆಯಲ್ಲಿ ಹಾಕಿದ್ದ ಪೆಂಡಾಲ್ ನಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ರಾತ್ರಿ ಬಿಟ್ಟು ಹೋಗಿದ್ದರು. ಈ ವಿಚಾರ ನಿನ್ನೆ ಇಡೀ ದಿನ ಜಟಾಪಟಿಗೆ ಕಾರಣವಾಗಿತ್ತು.
ಬಿಟ್ಟು ಹೋಗಿದ್ದ ಪ್ರತಿಮೆಗೆ ಶುಕ್ರವಾರ ರಾತ್ರೋರಾತ್ರಿ ಕಾಂಕ್ರೀಟ್ ಹಾಕಿ ಭದ್ರಪಡಿಸಿದ್ದು ಹಲವು ಪರ, ವಿರೋಧ ಚರ್ಚೆಗೆ ಕಾರಣವಾಗಿತ್ತು. ಪ್ರತಿಮೆ ಪ್ರತಿಷ್ಠಾಪಿಸಲು ಪಟ್ಟಣ ಪಂಚಾಯಿತಿ ಹಾಗೂ ಪೊಲೀಸರಿಂದ ಅನುಮತಿ ಪಡೆಯದೆ ಇದ್ದರಿಂದ ದಲಿತ ಸಂಘಟನೆಗಳಲ್ಲೇ ಎರಡು ಬಣಗಳಾಗಿ ಒಂದು ಬಣ ಅನುಮತಿ ಪಡೆದು ಪ್ರತಿಷ್ಠಾಪನೆ ಮಾಡುವಂತೆ ಪಟ್ಟು ಹಿಡಿದ್ರೆ, ಮತ್ತೊಂದು ಬಣ ಪುತ್ಥಳಿ ತೆರವು ಮಾಡುತ್ತೇವೆ ಎನ್ನುತ್ತಾರೆ.
ಹೀಗಾಗಿ ಎರಡು ಬಣಗಳು ಹಾಗೂ ಪೊಲೀಸರ ನಡುವೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಎರಡು ಬಣಗಳನ್ನು ಸಮಾಧಾನ ಪಡಿಸಿದ ಪೊಲೀಸರು ಒಂದು ಬಣದ ಸದಸ್ಯರಿಂದ ಅಂಬೇಡ್ಕರ್ ಪ್ರತಿಮೆಯನ್ನು ತೆರೆವುಗೊಳಿಸಿದ್ದಾರೆ.
ಪ್ರತಿಮೆ ತೆರೆವುಗೊಳಿಸುತ್ತಿದ್ದಂತೆಯೇ ಮತ್ತೊಂದು ಬಣದ ಸದಸ್ಯರು ಇದು ಅಂಬೇಡ್ಕರ್ ಗೆ ಮಾಡುತ್ತಿರುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ಮೂಡಿಗೆರೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆಯನ್ನು ಮಾಡಲಾಗಿತ್ತು. ಶನಿವಾರ ಇಡೀ ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಮೂಡಿಗೆರೆ ಸದ್ಯ ಶಾಂತಿಯುತವಾಗಿದೆ.
PublicNext
05/01/2025 08:08 am