ಚಿಕ್ಕಮಗಳೂರು: ಮೈಲಾರಲಿಂಗ ಸ್ವಾಮಿ ಹೆಸರಲ್ಲಿ ವೇಷ ಧರಿಸಿರುವ ನಾಲ್ವರ ತಂಡವೊಂದು ಮೂಡಿಗೆರೆ ತಾಲೂಕಿನ ಗ್ರಾಮೀಣ ಪ್ರದೇಶದ ಮನೆಗಳಿಗೆ ತೆರಳಿ ಜನರಿಗೆ ಹೆದರಿಸಿ ಮೋಸ ಮಾಡುತ್ತಿದೆ. ಈ ಬಗ್ಗೆ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಒಂಟಿ ಮನೆಗಳು ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿರುವ ಈ ತಂಡವು ಮನೆಯವರಿಗೆ ಇಲ್ಲಸಲ್ಲದ ಸುಳ್ಳು ಹೇಳಿ ಭಯ ಹುಟ್ಟಿಸಿ ಹಣ ಪೀಕುತ್ತಿದೆ.
ತಾಲೂಕಿನ ಬಾಳೆಹಳ್ಳಿ ಗ್ರಾಮದ ಮನೆಯೊಂದಕ್ಕೆ ಹೋಗಿದ್ದ ಇದೇ ತಂಡ ಮನೆಯಲ್ಲಿದ್ದ ಮಹಿಳೆಯರಿಗೆ ನಿಮ್ಮ ಯಜಮಾನನಿಗೆ ಕಂಟಕವಿದೆ. ಕಂಟಕ ಪರಿಹಾರಕ್ಕೆ ಪೂಜೆ ಮಾಡಿಸಬೇಕು. ಅದಕ್ಕೆ ಇಪ್ಪತ್ತು ಸಾವಿರ ಖರ್ಚಾಗುತ್ತದೆ. ಅಷ್ಟು ಕೊಟ್ಟರೆ ದೋಷ ಪರಿಹಾರ ಮಾಡಿಕೊಡುತ್ತೇವೆ ಎಂದೆಲ್ಲಾ ಹೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ. ಒಂಟಿ ಮನೆಗಳನ್ನೆ ಟಾರ್ಗೆಟ್ ಮಾಡುತ್ತಿರುವ ಈ ಗುಂಪು ನಿಮ್ಮ ಮನೆಗೆ ಮೈಲಾರಲಿಂಗ ಬಂದಾನಾ ಎಂದು ಮನೆ ಬಾಗಿಲು ತೆಗೆದ ತಕ್ಷಣ ಏಕಾಏಕಿ ಮನೆಯೊಳಗೆ ನುಗ್ಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸದ್ಯ ಮಲೆನಾಡಿನಲ್ಲಿ ಆ್ಯಕ್ಟಿವ್ ಆಗಿರುವ ಈ ಗ್ಯಾಂಗ್ ಮೈಲಾರಲಿಂಗನ ಹೆಸರಲ್ಲಿ ವಂಚನೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಯಾವುದೇ ದುರ್ಘಟನೆ ನಡೆಯುವ ಮುನ್ನ ಇಂತವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಿದೆ ಎನ್ನುವುದು ಸ್ಥಳೀಯರ ಒತ್ತಾಯ
PublicNext
06/01/2025 08:34 am