ಸಾಗರ : ಭವಿಷ್ಯ ಭಾರತಕ್ಕೆ ಯುವಪೀಳಿಗೆ ಪಾತ್ರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜ. 7ರಂದು ಬೆಳಿಗ್ಗೆ 10ಕ್ಕೆ ಒಕ್ಕಲಿಗರ ಸಭಾಭವನದಲ್ಲಿ ಏರ್ಪಡಿಸಲಾಗಿದೆ ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶ್ವಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ, ದುರ್ಗವಾಹಿನಿ ಸಂಘಟನೆಗಳ ಆಶ್ರಯದಲ್ಲಿ ಸನಾತನ ಧರ್ಮದಲ್ಲಿ ನಾರಿಯರ ಸ್ಥಾನ, ಜವಾಬ್ದಾರಿ, ಹಕ್ಕು ಕರ್ತವ್ಯಗಳ ಕುರಿತು ಅರಿವು ಮೂಡಿಸಲು ಹಿಂದೂ ಮಹಿಳೆಯರು, ಮಾತೆಯರು, ತರುಣಿಯರಿಗೆ ನೈಜ ಧರ್ಮದ ಪ್ರಶಿಕ್ಷಣ ನೀಡಲು ಈ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಹುಬ್ಬಳ್ಳಿ ಶ್ರೀಮಾತ ಆಶ್ರಮದ ಅಧ್ಯಕ್ಷೆ ಸಾಧ್ವಿ ತೇಜೋಮಯೀ ಮಾತಾಜಿ ವಿಷಯ ಕುರಿತು ಉಪನ್ಯಾಸ ನೀಡಲಿದ್ದು, ವಿಶ್ವಹಿಂದೂ ಪರಿಷತ್ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮುಖ್ಯವಕ್ತಾರರಾಗಿ ಪಾಲ್ಗೊಳ್ಳಲಿದ್ದಾರೆ. ಮಾತೃಶಕ್ತಿ ಪ್ರಾಂತ ಸಂಯೋಜಕಿ ಶುಭಾ ದಿಕ್ಸೂಚಿ ಮಾತನಾಡಲಿದ್ದು, ಪ್ರತಿಮಾ ಜೋಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂತೋಷ್ ಶಿವಾಜಿ, ಶ್ವೇತಾ ಅನಿಲ್, ಪುಷ್ಪಾ ಪೈ, ಹರ್ಷಿತಾ ಜೀವನ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಬದಲಾದ ದಿನಮಾನಗಳಲ್ಲಿ ಹಿಂದೂ ಧರ್ಮ ಸಂರಕ್ಷಣೆ ಜೊತೆಗೆ ಸನಾತನ ಸಂಸ್ಕೃತಿಯ ಅರಿವು ಮೂಡಿಸುವ ಅಗತ್ಯ ಹೆಚ್ಚು ಇದೆ. ಮಹಿಳೆಯರು, ಮಾತೆಯರು, ತರುಣಿಯರಿಗೆ ಧರ್ಮ ಕುರಿತು ಅರಿವು ಮೂಡಿಸಿದರೆ ಅವರ ಮೂಲಕ ಕುಟುಂಬದಲ್ಲಿ ಧರ್ಮ ಜಾಗೃತಿ ಮೂಡಿಸಲು ಸಾಧ್ಯವಿದೆ. ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವಲ್ಲಿ ಮಾತೆಯರ ಪಾತ್ರ ಮಹತ್ವದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಮಹಿಳೆಯರು ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಗೋಷ್ಟಿಯಲ್ಲಿ ಶ್ವೇತಾ ಅನಿಲ್, ಪುಷ್ಪಾ ಪೈ, ಹರ್ಷಿತಾ ಜೀವನ್, ಭಾರತೀ ಹೆಗಡೆ, ಅರ್ಚನಾ, ಸುಪ್ರಿತಾ ಹಾಜರಿದ್ದರು.
Kshetra Samachara
04/01/2025 04:11 pm