ಧಾರವಾಡ: ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಬಿಜೆಪಿ ಶೇ.40 ಕಮಿಷನ್ ಪಡೆಯುತ್ತಿದೆ ಎಂಬ ಆರೋಪ ಮಾಡಿದ್ದ ಗುತ್ತಿಗೆದಾರರು ಇದೀಗ ತಮ್ಮ ಬಾಕಿ ಬಿಲ್ ಪಡೆದುಕೊಳ್ಳಲು ಪರದಾಡುತ್ತಿದ್ದಾರೆ.
ಈ ಸಂಬಂಧ ಧಾರವಾಡದಲ್ಲಿ ತಮ್ಮ ಅಳಲು ತೋಡಿಕೊಂಡಿರುವ ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ್, ಉತ್ತರ ಕರ್ನಾಟಕದ ಗುತ್ತಿಗೆದಾರರ 25ರಿಂದ 30 ಸಾವಿರ ಕೋಟಿ ಬಿಲ್‌ನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ. ಮೂರು ವರ್ಷಗಳಿಂದ ಸರ್ಕಾರ ಸರಿಯಾಗಿ ಬಾಕಿ ಬಿಲ್ ಕೊಡುತ್ತಿಲ್ಲ. 25 ಸಾವಿರ ಕೋಟಿ ರೆಗ್ಯುಲರ್ ಪೇಮೆಂಟ್ ಬಾಕಿ ಇದೆ. ಬೃಹತ್ ನೀರಾವರಿ ಇಲಾಖೆಯ 10 ಸಾವಿರ ಕೋಟಿ, ಸಣ್ಣ ನೀರಾವರಿ ಇಲಾಖೆಯ 3 ಸಾವಿರ ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಯ 4 ಸಾವಿರ ಕೋಟಿ ಬಿಲ್ ಬಾಕಿ ಇದೆ. ಇದರ ಜೊತೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಬಿಲ್ ಕೂಡ ಬಾಕಿ ಇದೆ ಎಂದರು.
ಎರಡು ತಿಂಗಳಿಗೊಮ್ಮೆ ಸ್ವಲ್ಪ ಸ್ವಲ್ಪ ಪೇಮೆಂಟ್ ಮಾಡುತ್ತಿದ್ದಾರೆ. ಆಮೇಲೆ ಬಾಕಿ ಬಿಲ್ ಹಾಗೆಯೇ ಉಳಿಯುತ್ತಿದೆ. ಒಮ್ಮೆಲೆ ಎಲ್ಲವನ್ನೂ ಕ್ಲಿಯರ್ ಮಾಡಿದರೆ ತೊಂದರೆ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪೇಮೆಂಟ್ ಕ್ಲಿಯರ್ ಮಾಡುವ ಭರವಸೆ ನೀಡಿತ್ತು. ಪಂಚ ಗ್ಯಾರಂಟಿ ಬಂದ ಮೇಲೆ ಆ ಹಣವನ್ನು ಅದಕ್ಕೆ ಈ ಕಾಂಗ್ರೆಸ್‌ನವರು ಡೈವರ್ಟ್ ಮಾಡಿದ್ದಾರೆ. ಸಣ್ಣ ನೀರಾವರಿ ಇಲಾಖೆಯದ್ದು 4 ತಿಂಗಳಿನಿಂದ ದುಡ್ಡು ಬಂದಿಲ್ಲ. ಬೃಹತ್ ನೀರಾವರಿ ಇಲಾಖೆಯದ್ದು 6 ತಿಂಗಳಿನಿಂದ ದುಡ್ಡು ಬಂದಿಲ್ಲ. ರಾಜಕಾರಣಿಗಳು ಇಂತವರಿಗೇ ಗುತ್ತಿಗೆ ಕೊಡಬೇಕು ಎಂದು ಒತ್ತಡ ಹಾಕುತ್ತಾರೆ. ಇದರಿಂದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಶಾಸಕರು, ಸಚಿವರು ಈ ವಿಷಯದಲ್ಲಿ ತಲೆ ಹಾಕಬಾರದು. ಜನವರಿ 15ರ ಒಳಗೆ ಹಣ ಕೊಡುವ ಮಾತನ್ನು ಅಧಿವೇಶನದಲ್ಲಿ ಹೇಳಿದ್ದರು. ಅದನ್ನು ನೋಡಿಕೊಂಡು ನಾವು ಧರಣಿ ಮಾಡುತ್ತೇವೆ. ಟೆಂಡರ್ ನಡುವೆ ಬಂದು ತೊಂದರೆ ಕೊಡುವ ರಾಜಕಾರಣಿಗಳ ಮನೆ ಎದುರೇ ಧರಣಿ ಮಾಡುತ್ತೇವೆ ಎಂದರು.
ಬೀದರ್‌ನಲ್ಲಿ ಓರ್ವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸಿವಿಲ್ ಗುತ್ತಿಗೆ ಕೆಲಸ ಮಾಡುತ್ತಿದ್ದರು. ಈಗ ವಾತಾವರಣ ಕೆಟ್ಟು ಹೋಗಿದೆ. ಒತ್ತಡಕ್ಕೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಗಿದೆ. ಅದಕ್ಕೆ ಮಧ್ಯವರ್ತಿಗಳು ಬರದಂತೆ ನೋಡಿಕೊಳ್ಳಬೇಕು. ಪ್ರಿಯಾಂಕ್ ಖರ್ಗೆ ಬೆಂಬಲಿಗರ ಒತ್ತಡಕ್ಕೆ ಈ ಆತ್ಮಹತ್ಯೆ ನಡೆದಿದೆ. ಇದರಿಂದ ಸಚಿವರ ಹೆಸರೇ ಹಾಳಾಗುತ್ತದೆ. ಯಾರೇ ಸಚಿವರು ಇರಲಿ, ಶಾಸಕರು ಇರಲಿ, ಬೆಂಬಲಿಗರು ಇರಲಿ ಸಚಿವರ ಮೇಲೆ ಆರೋಪ ಬಂದಾಗ ಅದಕ್ಕೆ ಸಚಿವರೇ ಹೊಣೆಗಾರರಾಬೇಕಾಗುತ್ತದೆ ಎಂದರು.
Kshetra Samachara
04/01/2025 12:07 pm