ಹುಬ್ಬಳ್ಳಿ : ಹುಬ್ಬಳ್ಳಿಯ ನೂತನವಾಗಿ ನಿರ್ಮಿಸಿರುವ ಚನ್ನಮ್ಮ ವೃತ್ತದ ಬಳಿ ಇರುವ ಹಳೆ ಬಸ್ ನಿಲ್ದಾಣ, ತನ್ನ ಹಳೇ ವರ್ಚಸ್ಸು ಪಡೆದುಕೊಳ್ಳಲು ಸನ್ನದ್ದವಾಗಿದೆ. ಕಾಮಗಾರಿಯೂ ಪೂರ್ಣಗೊಂಡಿದ್ದು, ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಆದ್ರೆ ದುರಾದೃಷ್ಟಕ್ಕೆ ಇನ್ನೂವರೆಗೂ ಹಳೆ ಬಸ್ ಸ್ಟ್ಯಾಂಡ್ ಉದ್ಘಾಟನೆ ಆಗುತ್ತಿಲ್ಲ. ಇದರಿಂದ ಪ್ರಯಾಣಿಕರು ದಿನನಿತ್ಯ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 42 ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದರ ಕಾಮಗಾರಿ ಜೂನ್ 2022 ರಲ್ಲಿ ಪ್ರಾರಂಭವಾಗಿ ಮತ್ತು ಆಗಸ್ಟ್ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು.
ಈಗ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆಯುತ್ತಿವೆ. ಸಧ್ಯ 2025 ಕ್ಕೆ ಕಾಲಿಟ್ಟರುವ ಬಸ್ ನಿಲ್ದಾಣ ಉದ್ಘಾಟನೆ ಮುಂದೂಡುತ್ತ ಸಾಗಿದ್ದು, ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿ ಸಾಮಾನ್ಯ ಮೂಲಭೂತ ಸೌಲಭ್ಯಗಳ ಇಲ್ಲದೆ ಪರದಾಡುವಂತಾಗಿದೆ.
ಇನ್ನು ಬಸ್ ನಿಲ್ದಾಣ ಸಿದ್ದವಾದ್ರೂ ಉದ್ಘಾನೆಯಾಗದ ಕಾರಣ ಪ್ರಯಾಣಿಕರು ಸುಡುಬಿಸಿಲಿನಲ್ಲಿ ಧೂಳಿನಲ್ಲಿ ಬಸ್‌ಗೆ ಕಾಯುವ ಸ್ಥಿತಿ ಇದೆ. ಪ್ರಯಾಣಿಕರು ಕುಳಿತುಕೊಳ್ಳಲು ಸರಿಯಾದ ಸೀಟ್ ವ್ಯವಸ್ಥೆ ಇಲ್ಲ. ಶೌಚಾಲಯ ವಿಲ್ಲ. ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಿಗಾಗಿ ರಸ್ತೆಬದಿಯಲ್ಲೇ ಕಾಯಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಬಸ್ ನಿಲ್ದಾಣದ ಎದುರು ನಡೆಯುತ್ತಿರುವ ಫ್ಲೈಓವರ್ ಕಾಮಗಾರಿಯು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳ್ಳುವಂತೆ ಮಾಡಿದೆ.
ಧೂಳಿನ ಮಟ್ಟವನ್ನು ಹೆಚ್ಚಿಸಿದೆ. ಜಿಲ್ಲಾ ಕೇಂದ್ರದಿಂದ ಬರುವ ಪ್ರಯಾಣಿಕರು ಎಲ್ಲಿ ಬಸ್ ಇಳಿಯಬೇಕು, ಹತ್ತಬೇಕು ಎಂಬ ಗೊಂದಲದಲ್ಲಿ ಪ್ರಯಾಣಿಕರಿದ್ದಾರೆ. ಈ ಹಿಂದೆ ಇದ್ದ ಹಳೇ ಬಸ್ ನಿಲ್ದಾಣದಲ್ಲಿ ನಿತ್ಯ ಸಾವಿರಾರು ಜನ ಗ್ರಾಮೀಣ ಭಾಗದಿಂದ ಬಂದು ಹೋಗುತ್ತಿದ್ದರು. ಆಗ ಇದ್ದ ವ್ಯಾಪಾರ ವಹಿವಾಟು ಇಲ್ಲದೆ ಕಂಗಾಲಾಗಿ ಹೋಗಿದ್ದಾರೆ.
ಸ್ಮಾರ್ಟ್ ಸಿಟಿ ಅಡಿಯಲ್ಲಿ ತಲೆ ಎತ್ತಿ ನಿಂತ ಹಳೇ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಲು, ಅಧಿಕಾರಿಗಳು ಯಾಕೆ ಹಿಂಜರಿಯುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ. ಮುಂದಿನ ತಿಂಗಳು, ಮುಂದಿನ ತಿಂಗಳು ಎಂದು ಉದ್ಘಾಟನೆಯನ್ನು ಮುಂದುಡುತ್ತಿದ್ದಾರೆ. ಕೂಡಲೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಳೇ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
06/01/2025 04:54 pm