ಹುಬ್ಬಳ್ಳಿ: ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಖಂಡನೀಯವಾಗಿದೆ. ಗ್ಯಾರಂಟಿ ಯೋಜನೆ ಅಂತ ಫ್ರೀ ಕೊಡುತ್ತಾರೆ. ಮತ್ತೊಂದು ಕಡೆ ಸಾಲ ತೆಗೆದುಕೊಳ್ಳುತ್ತಾರೆ. ಸಾಲ ಮತ್ತು ಬಡ್ಡಿಯಲ್ಲಿ ಸಾರಿಗೆ ಸಂಸ್ಥೆಗಳು ನಡೆಯುತ್ತಿವೆ. ನಾಲ್ಕು ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಇದು ಸರ್ಕಾರದ ನಿರ್ಲಕ್ಷ್ಯ ಮತ್ತು ದುರಾಡಳಿತ ಇದಕ್ಕೆ ಕಾರಣ. ಪ್ರಯಾಣಿಕರಿಗೆ ಪೆಟ್ಟು ನೀಡುವ ಕಾರ್ಯವಾಗುತ್ತಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಅವರು ಆಡಳಿತ ಬಿಗಿಯನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಈ ರೀತಿಯ ಘಟನೆ ನಡೆಯುತ್ತಿದೆ. ಟಿಕೆಟ್ ದರ ಏರಿಕೆಗೆ ನನ್ನ ವಿರೋಧ ಇದೆ ಎಂದರು.
ರಾಜ್ಯದಲ್ಲಿ ದಪ್ಪ ಚರ್ಮದ ಸರ್ಕಾರವಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸಿದ್ದರಾಮಯ್ಯ ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತೇವೆ ಎಂದಿದ್ದರು. ಆದರೆ ಇವತ್ತು ಸಚಿವ ಮತ್ತು ಅಧಿಕಾರಿಗಳ ಭ್ರಷ್ಟಾಚಾರದ ಮಿತಿಯಲ್ಲಿ ಕೆಲಸ ಮಾಡಿ ಅಂತಾರೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮನಸ್ಥಿತಿ ಸಿದ್ದರಾಮಯ್ಯಗೆ ಇಲ್ಲ. ಭ್ರಷ್ಟಾಚಾರದಿಂದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳಗಾವಿ ತಹಶಿಲ್ದಾರರ ಸಿಬ್ಬಂದಿ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಮತ್ತೆ ಕೆಲಸಕ್ಕೆ ಹಾಜರು ಆಗಿದ್ದಾನೆ. ಇದೊಂದು ದಪ್ಪ ಚರ್ಮದ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ ಖರ್ಗೆ ರಾಜಿನಾಮೆ ಕೊಟ್ಟು ತನಿಖೆ ಎದುರಿಸಲಿ.ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆ ಆಗಬೇಕು. ಸಿದ್ದರಾಮಯ್ಯ ಅವರಿಗೆ ಯಾಕೆ ಹೆಸರಿನ ಆಸೆ ಹುಟ್ಟಿದಿಯೋ..? ಮೈಸೂರಿನಲ್ಲಿ ರಸ್ತೆಯೊಂದಕ್ಕೆ ಸಿದ್ದರಾಮಯ್ಯ ಹೆಸರು ಇಡಲು ಹೊರಟಿರುವುದಕ್ಕೆ ಕಿಡಿ ಕಾರಿದ ಅವರು, ಪ್ರೀತಿ ,ವಿಶ್ವಾಸದಿಂದ ರಸ್ತೆಗೆ ಹೆಸರು ಇಡಬೇಕು. ಒಬ್ಬ ಸಿಎಂ ಹೆಸರನ್ನು ರಸ್ತೆಗಿಡಬೇಕು ಅಂದಾಗ ವಿರೋಧ ಬರಲೇ ಬಾರದು. ಈ ರೀತಿ ವಿವಾದ ಹುಟ್ಟಿದಾಗ ಸಿಎಂ ಸಿದ್ದರಾಮಯ್ಯ ಬೇಡ ಅನ್ನಬೇಕಿತ್ತು. ಮೈಸೂರು ಅಭಿವೃದ್ಧಿ ಪಡಿಸಿದ್ದು ಮಹರಾಜರು. ಅವರು ಹೆಸರಿನ ರಸ್ತೆ ಬದಲಾವಣೆ ಮಾಡೋದು ಸರಿಯಲ್ಲ. ಸಿದ್ದರಾಮಯ್ಯ ಮೊಂಡುತನ ನಡೆಯುತ್ತಿದೆ. ಇದರಿಂದಾಗಿ ಇಂತಹ ವಿವಾದಗಳು ಹುಟ್ಟಿಕೊಂಡಿವೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/01/2025 02:01 pm