ಶಿವಮೊಗ್ಗ : ಹೊಸ ವರ್ಷವನ್ನು ನಾಡಿನ ಜನತೆ ನಾನಾ ರೀತಿಯಲ್ಲಿ ಬರಮಾಡಿಕೊಂಡರು. ಆದರೆ, ಶಿವಮೊಗ್ಗದ ಈ ಶಾಲೆ ವಿದ್ಯಾರ್ಥಿಗಳು ಮಾತ್ರ, ವಿಭಿನ್ನ ಮತ್ತು ವಿಶಿಷ್ಟವಾಗಿ ಹೊಸ ಸಂವತ್ಸರವನ್ನು ಬರಮಾಡಿಕೊಂಡರು. ಅದು ತಮ್ಮ-ತಮ್ಮ ಪೋಷಕರ ಪಾದ ಪೂಜೆ ನೆರವೇರಿಸುವುದರ ಮೂಲಕ.
ಹೌದು, ಶಿವಮೊಗ್ಗ ನಗರದ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಕಳೆದ ಹಲವಾರು ವರ್ಷಗಳಿಂದ ಹೊಸ ವರ್ಷವನ್ನು ಆಚರಣೆ ಮಾಡುತ್ತಾರೆ. ಇವರು, ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ಮಾತ್ರ ಸ್ವಲ್ಪ ವಿಭಿನ್ನ. ಅದರಂತೆ ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ, ತಮ್ಮ ತಂದೆ-ತಾಯಿಗಳಿಗೆ ಪಾದ ಪೂಜೆ ನೆರವೇರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದಕ್ಕೆ ಶಾಲೆ ಸಂಸ್ಥೆಯವರು ಸಹ ಸಾಥ್ ನೀಡಿದ್ರು.
ಶಾಲೆಯ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ-ತಮ್ಮ ಪೋಷಕರಿಗೆ ಪಾದಪೂಜೆ ನೆರವೇರಿಸಿ, ಗುರು-ಹಿರಿಯರ ಆಶೀರ್ವಾದ ಪಡೆದರು. ಕೇಕ್ ಕತ್ತರಿಸಿ, ಕುಣಿದು ಕುಪ್ಪಳಿಸುವ ಮಂದಿಗೆ ಅದು ನಮ್ಮ ಸಂಸ್ಕೃತಿಯಲ್ಲ ಎಂದು ತೋರಿಸಿಕೊಟ್ಟರು.
ಇನ್ನು ಇಲ್ಲಿ ಹೊಸ ವರ್ಷ ಆಚರಣೆ ಕೇವಲ ಪಾದಪೂಜೆಗೆ ಮಾತ್ರ ಸೀಮಿತವಾಗಿರಲಿಲ್ಲ. ಜೊತೆಗೆ ಶ್ರೀ ಶಾರದಾ ಮಾತೆಯ ಜಯಂತಿ ಮತ್ತು ಸತ್ಯನಾರಾಯಣ ಪೂಜೆ ಸಹ ನೆರವೇರಿಸಲಾಗಿತ್ತು. ಇಲ್ಲಿನ ವಿದ್ಯಾರ್ಥಿಗಳಿಗೆ ತಾವುಗಳು ಹೇಗೆ ಆಚಾರ ವಿಚಾರ ಮತ್ತು ಭಾರತೀಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕೆನ್ನುವುದರ ಬಗ್ಗೆ ತಿಳಿ ಹೇಳಲಾಯಿತು. ಕೇವಲ ಆಟ-ವಿಜ್ಞಾನ ಪ್ರದರ್ಶನ ಮಾತ್ರ ಸೀಮಿತವಾಗಿಸದೇ, ನಗರದ ಶ್ರೀ ರಾಮಕೃಷ್ಣ ಶಾಲೆ, ಸಂಸ್ಕೃತಿಯನ್ನು ಸಹ ಇಂದಿನ ಮಕ್ಕಳಲ್ಲಿ ರೂಢಿಸುವ ಮಹತ್ಕಾರ್ಯ ಮಾಡಿದೆ. ಇದು, ಇತರೆ ಶಾಲೆಗಳಿಗೂ ಮಾದರಿಯಾಯ್ತು.
PublicNext
01/01/2025 03:14 pm